ಬೆಂಗಳೂರು : ನಮ್ಮ ಸರ್ಕಾರದ ಬಾಗಿಲು ತೆರೆದಿದೆ. ನನ್ನ ಹೃದಯದ ಬಾಗಿಲು ತೆರೆದಿದೆ. ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತೇವೆ. ಸರ್ಕಾರ ಸದಾ ನಿಮಗೆ ಸಹಕಾರ ನೀಡಲು ಸಿದ್ಧವಿದೆ.
ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ 2022 ರ ಅಂಗವಾಗಿ ಬೆಂಗಳೂರಿನಲ್ಲಿರುವ ಐಟಿ ಬಿಟಿ ಕಂಪನಿಗಳ ಸಿಇಒಗಳಿಗೆ ನೀಡಿದ ಭರವಸೆಯ ನುಡಿಗಳು.
ನಮ್ಮ ಸರ್ಕಾರ ಐಟಿ ಬಿಟಿ ಉದ್ಯಮಕ್ಕೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದು ಸರ್ವ ರೀತಿಯ ಸಹಾಯ ನೀಡಲಿದೆ. ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕನ ಸ್ಥಾನದಲ್ಲಿದ್ದುಕೊಂಡು ಕರ್ನಾಟಕ ದಾಪುಗಾಲು ಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಬೆಂಗಳೂರು ಟೆಕ್ ಸಮಿಟ್ ಗೆ ೨೫ ವರ್ಷಾಚರಣೆ. ಈ ಮಹತ್ವದ ಸಂವಾದ ಕಾರ್ಯಕ್ರಮಕ್ಕೆ ಐಟಿ.ಬಿಟಿ, ಜೈವಿಕ ತಂತ್ರಜ್ಞಾನ, ಸ್ಪಾರ್ಟ್ ಅಪ್ ವಲಯದ ನೂರಕ್ಕೂ ಹೆಚ್ಚು ಮುಖ್ಯಸ್ಥರು ಮತ್ತು ಸಿಇಒಗಳು ಸಂವಾದದಲ್ಲಿ ಪಾಲ್ಗೊಂಡು ಸರ್ಕಾರ ಕೈಗೊಂಡಿರುವ ಹಲವಾರು ಉದ್ಯಮ ಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ನ
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನಾವೀನ್ಯತಾ ಕ್ಲಸ್ಟರ್‍ಗಳನ್ನು ಸೃಷ್ಟಿಸುವುದು, ಸಂಶೋಧನೆ, ಜಾಗತಿಕ ಮಟ್ಟದ ಅತ್ಯುನ್ನತ ಸಂಶೋಧನಾ ವಲಯವನ್ನು ಆಕರ್ಷಿಸಲು ಹಾಗೂ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಐಟಿ ಬಿಟಿ ಹಾಗೂ ವಿವಿಧ ವಲಯಗಳ ಕಂಪನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಭಿವೃದ್ಧಿಗೆ ಪೂರಕವಾಗಿರುವ ಆಸಕ್ತಿ
ಭಾರತ ದೇಶ ಪಾಶ್ಚಿಮಾತ್ಯ ದೇಶಗಳಿಗಿಂತಲೂ ವಿಭಿನ್ನವಾಗಿದ್ದು, ತನ್ನದೇ ಸಾಮಾಜಿಕ ಸಂಯೋಜನೆ ಮತ್ತು ರಚನೆಗಳಿವೆ. ಏಳಿಗೆಯಾಗಬೇಕೆನ್ನುವ ಹಸಿವು, ಆಸಕ್ತಿ ಮತ್ತು ಆತುರ ಮಾನವನ ಸಹಜ ಗುಣಧರ್ಮ. ಆಧುನಿಕ ಭಾರತದಲ್ಲಿ ಎಲ್ಲಾ ಕೈಗಾರಿಕಾ ಕ್ಷೇತ್ರಗಳ ಸಮಗ್ರ ಬೆಳವಣಿಗೆಗೆ ಆಸಕ್ತಿ ಕಂಡುಬರುತ್ತಿದ್ದು, ರಾಜ್ಯದ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದರು.
ಬೆಂಗಳೂರು ವಿಶ್ವದಲ್ಲಿಯೇ ನಂಬರ್ 1 ಸಿಲಿಕಾನ್ ನಗರ ಎನಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಕ್ಷೇತ್ರಗಳ ಬೆಳವಣಿಗೆ ಸರ್ಕಾರಕ್ಕೆ ಸವಾಲು ಮತ್ತು ಅವಕಾಶಗಳನ್ನು ಒಡ್ಡಿವೆ. ಸವಾಲು ಮತ್ತು ಅವಕಾಶಗಳನ್ನು ಚಿಮ್ಮುಹಲಗೆಯಂತೆ ಬಳಸಿ ಎತ್ತರಕ್ಕೆ ನಾವು ಹಾರಬಹುದಾಗಿದೆ. ಬೆಂಗಳೂರು ದೇಶಕ್ಕೆ ಕೊಡುಗೆ ನೀಡುವ ಸ್ಥಾನದಲ್ಲಿದ್ದು, ಕೊಡುಗೆ ನೀಡುವ ಸ್ಥಾನದಲ್ಲಿರುವವರು ನಾಯಕರಾಗಿರುತ್ತಾರೆ ಎಂದರು.
ನೀತಿ ನಿರೂಪಣೆ
ನೀತಿಗಳಲ್ಲಿ ಬದಲಾವಣೆ, ನಿಯಮಗಳ ಸರಳೀಕರಣ, ಕೌಶಲ್ಯಯುಳ್ಳ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದು ವಿವಿಧ ಕಂಪನಿಗಳ ಸಿಇಒ ಹಾಗೂ ಅವರ ಪ್ರತಿನಿಧಿಗಳು ತಿಳಿಸಿದ್ದು, ಇವುಗಳನ್ನು ಬಗೆಹರಿಸಲು ನಮ್ಮದೇ ರೀತಿಯಲ್ಲಿ ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೌಶಲ್ಯಯುತ ಮಾನವ ಸಂಪನ್ಮೂಲ ಬಹಳ ಮುಖ್ಯ. ಮೈಸೂರಿನ ಮಹಾರಾಜರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನೀಡಿದ ಒತ್ತು, ಕರ್ನಾಟಕದಲ್ಲಿ ತಾಂತ್ರಿಕತೆಯ ಅಭಿವೃದ್ಧಿಗೆ ತಳಪಾಯ ಹಾಕಿತು. ಐಟಿ ಬಿಟಿ ವಲಯದ ಉಗಮ ಹೊಸ ಪೀಳಿಗೆಗೆ ನೂತನ ವೇಗ ಮತ್ತು ಆಯಾಮವನ್ನು ತಂದುಕೊಟ್ಟಿದೆ. ತಳಹಂತದವರೆಗೂ ತಂತ್ರಜ್ಞಾನ ಮುಟ್ಟುವಲ್ಲಿ ಸಫಲವಾಗಿದೆ. ತಂತ್ರಜ್ಞಾನದ ಉಪಯೋಗಗಳು ಮತ್ತು ಅವಕಾಶಗಳು ಏರುಗತಿಯನ್ನು ಕಂಡಿದ್ದು, ಇನ್ನಷ್ಟು ವೇಗ ಪಡೆಯಲು ಕರ್ನಾಟಕ ಅತ್ಯುತ್ತಮ ಸ್ಥಳವಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.




