ಬೆಂಗಳೂರು: ನನಗಿಂತ ಮೊದಲೇ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಸಚಿವ ಪ್ರಭು ಚೌವ್ಹಾಣ್, ಸಂಕನೂರು ಅಕ್ರಮ ಕುರಿತಂತೆ ಪತ್ರ ಬರೆದಿದ್ದರು. ಅವರಿಗೆ ಮಾತ್ರ ನೋಟಿಸ್ ಕೊಡದಂತ ಸಿಐಡಿ ಪೊಲೀಸರು, ನನಗೆ ಮಾತ್ರ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದಾರೆ. ಇದು ಉದ್ದೇಶಪೂರ್ವಕವಾಗಿಯೇ ನೋಟಿಸಿ ನೀಡಿದ್ದಾರೆ ಎಂಬುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಸಿಐಡಿ ನೀಡಿರುವಂತ ನೋಟಿಸ್ ನಲ್ಲಿ ಯಾವ ನಿಯಮದಡಿ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಹೇಳಿಲ್ಲ. ಇಂದು ಅಥವಾ ನಾಳೆ ಲಿಖಿತ ಪತ್ರದಲ್ಲಿ ನೋಟಿಸ್ ಗೆ ಉತ್ತರ ನೀಡುತ್ತೇನೆ ಎಂದರು.
ನಾನು ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಆರೋಪಿಯೇ ಅಲ್ಲ. ಯಾವ ನಿಯಮದ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಅವರಿಗೂ ಗೊತ್ತಿಲ್ಲ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣ ನನಗೆ ನೋಟಿಸ್ ಬರುತ್ತದೆ. ಅದೇ ಸಚಿವ ಪ್ರಭು ಚೌವ್ಹಾಣ್ ಅಕ್ರಮದ ಬಗ್ಗೆ ಮೊದಲೇ ಪತ್ರ ಬರೆದಿದ್ದಾರೆ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.




