ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಉಪ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಬ್ಯಾಡಗಿ ತಾಲೂಕಿನ 12-ಬಿಸಲಹಳ್ಳಿ ಗ್ರಾಮ ಪಂಚಾಯತಿಯ ಬೆಳಕಚೇರಿ, ಹಿರೇಕೆರೂರು ತಾಲೂಕಿನ 13-ಬೆಟಕೇರೂರ ಗ್ರಾಮ ಪಂಚಾಯತಿಯ ಬೆಟಕೇರೂರ-2 ಹಾಗೂ 5-ಚಿಕ್ಕೇರೂರ ಗ್ರಾಮ ಪಂಚಾಯತಿಯ ಚಿಕ್ಕೇರೂರು-6, ರಟ್ಟಿಹಳ್ಳಿ ತಾಲೂಕಿನ ಚಿಕ್ಕಯಡಚಿ ಗ್ರಾಮ ಪಂಚಾಯತಿ ಕ್ಯಾತನಕೇರಿ ಹಾಗೂ ಹಾನಗಲ್ ತಾಲೂಕಿನ ಹಿರೂರು ಗ್ರಾಮ ಪಂಚಾಯತಿ ಬಾಳಿಹಳ್ಳಿ ಕ್ಷೇತ್ರಕ್ಕೆ ತಲಾ ಒಂದರಂತೆ ಒಟ್ಟು ಐದು ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
ಮೇ 5 ರಂದು ಗುರುವಾರ ನಾಮಪತ್ರಗಳ ಸಲ್ಲಿಕೆ ಆರಂಭ, ಮೇ 10 ರಂದು ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 11 ರಂದು ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 13 ರಂದು ಶುಕ್ರವಾರ ನಾಮಪತ್ರ ಹಿಂಪಡೆಯುವ ಕೊನೆಯ ದಿನ. ಮೇ 20 ರಂದು ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೇ 21 ರಂದು ಶನಿವಾರ ಮರು ಮತದಾನಕ್ಕೆ ಸಮಯ ನಿಗಧಿಪಡಿಸಲಾಗಿದೆ. ಮೇ 22 ರಂದು ಬೆಳಿಗ್ಗೆ 8 ಗಂಟೆಯಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಜರುಗಲಿದೆ. ಮೇ 22ರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣೆ ನಡೆಯುವ ಪಂಚಾಯತಿಗಳಿಗೆ ಚುನಾವಣಾಧಿಕಾರಿಗಳನ್ನು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದ್ದು, ಚುನಾವಣಾ ಪ್ರಕ್ರಿಯೆ ಇಂದಿನಿಂದ ಆರಂಭವಾಗಿರುತ್ತದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿ.05-05-2022 ರಿಂದ ದಿ.22-05-2022ರವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




