ಮುಂಬೈ: ಟಿಮ್ ಡೇವಿಡ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಡೇನಿಯಲ್ ಸ್ಯಾಮ್ಸ್ ಅವರ ಬೌಲಿಂಗ್ ಕೈಚಳಕದಿಂದ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ದ 5 ರನ್ ಗಳ ರೋಚಕ ಗೆಲುವು ಪಡೆದಿದೆ.
ಬ್ರಾಬೋರ್ನ್ ಮೈದಾನದಲ್ಲಿ ನಡೆದ ರೋಚಕ ಕದನದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಇಶನ್ ಕೀಶನ್ ಮೊದಲ ವಿಕೆಟ್ಗೆ 74 ರನ್ ಸೇರಿಸಿದರು.
43 ರನ್ ಗಳಿಸಿದ್ದ ರೋಹಿತ್ ಶರ್ಮಾ ರಶೀದ್ ಖಾನ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದರು. ಸೂರ್ಯಕುಮಾರ್ ಸಾಂಗ್ವಾನ್ಗೆ ಬಲಿಯಾದರು. 45 ರನ್ ಗಳಿಸಿದ್ದ ಇಶನ್ ಕಿಶನ್ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು.
ತಿಲಕ್ ವರ್ಮಾ 21, ಕಿರಾನ್ ಪೊಲಾರ್ಡ್ 4, ಟಿಮ್ ಡೇವಿಡ್ ಅಜೇಯ 44 ರನ್ ಗಳಿಸಿದರು. ಮುಂಬೈ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆ ಹಾಕಿತು.
178 ರನ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಗೆ ವೃದ್ದಿಮಾನ್ ಸಾಹಾ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್ ಗೆ 106 ರನ್ ಸೇರಿಸಿದರು. 13 ನೇ ಓವರ್ನಲ್ಲಿ ದಾಳಿಗಿಳಿದ ಮುರುಗನ್ ಅಶ್ವಿನ್ ವೃದ್ದಿಮಾನ್ ಸಾಹಾ (55)ಹಾಗೂ ಶುಭಮನ್ ಗಿಲ್ (52) ಅವರನ್ನು ಪೆವಲಿಯನ್ಗೆ ಅಟ್ಟಿದರು.
ಸಾಯಿ ಸುದರ್ಶನ್ 14, ಹಾರ್ದಿಕ್ ಪಾಂಡ್ಯ 24, ರಾಹುಲ್ ತೆವಾಟಿಯಾ 3, ಡೇವಿಡ್ ಮಿಲ್ಲರ್ ಅಜೇಯ 19 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಗುಜರಾತ್ ತಂಡಕ್ಕೆ ಗೆಲ್ಲಲು 6 ಎಸೆತದಲ್ಲಿ 9 ರನ್ ಬೇಕಿತ್ತು.
ಆಗ ದಾಳಿಗಿಳಿದ ಡೇನಿಯಲ್ ಸ್ಯಾಮ್ಸ್ ಕೇವಲ 3 ರನ್ ಕೊಟ್ಟು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಗುಜರಾತ್ 5 ವಿಕೆಟ್ ನಷ್ಟಕ್ಕೆ 172 ರನ್ ಪೆರಿಸಿ ವಿರೋಚಿತ ಸೋಲು ಅನುಭವಿಸಿತು. ಟಿಮ್ ಡೇವಿಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.