ಹಾಫ್‌ ಸೆಂಚುರಿ ಬಾರಿಸಿದ ಪ್ರಿಯಾಂಕಾ ಉಪೇಂದ್ರ.!

ಬಂಗಾಳಿ ಬೆಡಗಿ ಪ್ರಿಯಾಂಕ ತ್ರಿವೇದಿ 1996 ರಲ್ಲಿ ಮಿಸ್ ಕೊಲ್ಕತ್ತಾ ಆಗಿ ಹೊರ ಬಂದರು. ನಂತರ ಇವರಿಗೆ ಅನೇಕ ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ವೃತ್ತಿ ಜೀವನದಲ್ಲಿ 50ನೇ ಸಿನಿಮಾದ ಮೆಟ್ಟಿಲೇರಿದ್ದಾರೆ. ಕೆಲ ನಾಯಕಿಯರು ಮದುವೆಯ ನಂತರ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಬ್ಬರು ಮಕ್ಕಳು ಇದ್ದರು ಕೂಡ ಸಿನಿಮಾ ರಂಗದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಇನ್ನು ಅವರ ನಟನೆಯ 50ನೇ ‘ಡಿಟೆಕ್ಟಿವ್‌ ತೀಕ್ಷ್ಣ’ ಸಿನಿಮಾದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.

‘ನಾನು 50 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರೆ ನಂಬಲು ಆಗುವುದಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ, ಬೆಂಗಾಲಿ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳು ಸೇರಿ ನನ್ನ ನಟನೆಯ ಚಿತ್ರಗಳ ಸಂಖ್ಯೆ 50ರ ಗಡಿ ದಾಟಿದೆ. ನನ್ನ ಅದೃಷ್ಟವೆಂದರೆ, ನಾನು ಎಲ್ಲಾ ಭಾಷೆಗಳಲ್ಲಿಯೂ ಒಳ್ಳೊಳ್ಳೆಯ ಸಿನಿಮಾಗಳಲ್ಲಿ ಮತ್ತು ಉತ್ತಮ ಕಲಾವಿದರ ಜತೆಗೆ ನಟಿಸಿದ್ದೇನೆ’ ಎಂದು ಪ್ರಿಯಾಂಕಾ ಉಪೇಂದ್ರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ನಾನು ನಾಯಕಿಯಾಗಿ ನಟಿಸುತ್ತಿದ್ದೆ. ನನ್ನ ಅದೃಷ್ಟ ಮದುವೆಯಾದ ಮೇಲೂ ಕೂಡ ‘ಕ್ರೇಜಿಸ್ಟಾರ್‌’, ‘ಶ್ರೀಮತಿ’ಯಂತಹ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ‘ಮಮ್ಮಿ’ ಸಿನಿಮಾದ ನಂತರ ನನ್ನ ಕರಿಯರ್‌ ಬದಲಾಯಿತು. ಅನೇಕ ನಿರ್ಮಾಪಕರು, ನಿರ್ದೇಶಕರು ನನಗೆ ಹೊಸ ರೀತಿಯ ಸ್ಕ್ರಿಪ್ಟ್‌ಗಳನ್ನು ತರಲು ಆರಂಭಿಸಿದರು. ‘ಮಮ್ಮಿ’ ಸಿನಿಮಾದಲ್ಲಿ ನಾನು ಯಾವುದೇ ನಾಯಕರಿಲ್ಲದೆ ನಟಿಸಿದ್ದೆ. ಆ ಸಿನಿಮಾ ಹಿಟ್‌ ಆಯಿತು. ಈಗ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ಉಗ್ರಾವತಾರ ಸಿನಿಮಾದಲ್ಲಿ ನಾನು ಭರ್ಜರಿ ಆ್ಯಕ್ಷನ್‌ ಮಾಡಿದ್ದೇನೆ. ‘ವೈರಸ್‌’ ಎಂಬ ಸಿನಿಮಾದಲ್ಲಿಯೂ ಸಹ ರೋಪ್‌ ಆ್ಯಕ್ಷನ್‌ ಮಾಡಿದ್ದೇನೆ. ಈಗ ‘ಡಿಟೆಕ್ಟಿವ್‌ ತೀಕ್ಷ್ಣ’ ಸಿನಿಮಾದಲ್ಲಿ ಸಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ 50 ಸಿನಿಮಾಗಳ ಸಾಧನೆಗೆ ಅಭಿಮಾನಿಗಳ ಆಶೀರ್ವಾದವೂ ಕಾರಣ. ಅವರಿಲ್ಲದೆ ನಾನು ಇದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ಕುಟುಂಬದ ಸಪೋರ್ಟ್‌ ಬಹಳ ಇದೆ. ನನ್ನ ಮಕ್ಕಳು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಆ್ಯಕ್ಷನ್‌ ಮತ್ತು ಹಾರರ್‌ ಸಿನಿಮಾ ಹೆಚ್ಚು ಮಾಡಲು ಪ್ರೇರೇಪಿಸುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.

ಇನ್ನು ಪ್ರಿಯಾಂಕಾ ರವರ 50ನೇ ಸಿನಿಮಾ ‘ಡಿಟೆಕ್ಟಿವ್‌ ತೀಕ್ಷ್ಣ’ದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಕಥೆ ಇದ್ದು, ಇದನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆಯಂತೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

About The Author