ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ದೈಹಿಕ ಶಿಕ್ಷಣ, ಬಿ.ವೋಕ್ ವೃತ್ತಿಪರ ವಿಷಯಗಳು ಹಾಗೂ ಡಿಪ್ಲೋಮಾ ಕೋರ್ಸ್ ವಿಷಯಗಳ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಡೆಸಲು ಆರ್ಥಿಕ ಸಾಮಥ್ರ್ಯವುಳ್ಳ ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್, ಸಂಸ್ಥೆಗಳಿಂದ ನವೀನ ಸಂಯೋಜನೆಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಿಂದಲೂ ತಮ್ಮ ಕಾಲೇಜುಗಳ ಮುಂದುವರಿಕೆ, ಸಂಯೋಜನೆ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನಾ ಪರಿಶೀಲನೆ, ಶಾಶ್ವತ ಸಂಯೋಜನೆಯ ನವೀಕರಣ, ಹೊಸ ಪದವಿ ಹಾಗೂ ಸ್ನಾತಕೋತ್ತರ, ಪದವಿ ಕೋರ್ಸುಗಳಿಗೆ ನವೀನ ಸಂಯೋಜನೆ, ಐಚ್ಚಿಕ ವಿಷಯ ಸಮೂಹ, ಭಾಷಾ ವಿಷಯಗಳ ನವೀನ ಸಂಯೋಜನೆ, ವಿದ್ಯಾರ್ಥಿ ಪ್ರವೇಶಾತಿ ಪ್ರಮಾಣದ ಹೆಚ್ಚಳ ಮುಂತಾದವುಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಂಬಂಧಿಸಿದ ಟ್ರಸ್ಟ್ಗಳು, ವಿದ್ಯಾಸಂಸ್ಥೆಗಳು ಹಾಗೂ ಈಗಾಗಲೇ ಸಂಯೋಜನೆ ಹೊಂದಿರುವ ಕಾಲೇಜುಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನಂತರ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗಾಗಿ ಸಂಯೋಜನಾ ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ದ್ವಿಪ್ರತಿಯಲ್ಲಿ ಪ್ರತ್ಯೇಕವಾಗಿ ಕಾಲೇಜು ಅಭಿವೃದ್ಧಿ ಪರಿಷತ್ ಕಚೇರಿಗೆ ಸಲ್ಲಿಸಬಹುದಾಗಿದೆ. ಬಿ.ಎಡ್.,/ಬಿ.ಪಿ.ಎಡ್., ಅಥವಾ ಇತರೆ ವೃತ್ತಿಪರ ಕಾಲೇಜು ಪ್ರಾರಂಭಿಸಲು ಇಚ್ಚಿಸುವ ನೋಂದಾಯಿತ ಸಂಸ್ಥೆಗಳು ಆನ್ಲೈನ್ ಮೂಲಕ ಸಂಯೋಜನಾ ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಅಥವಾ ಸಂಬಂದಿಸಿದ ಇತರ ಸಕ್ಷಮ ಪ್ರಾಧಿಕಾರಗಳ ಪೂರ್ವಾನುಮೋದನೆಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು. ಜೊತೆಗೆ ವಿಶ್ವವಿದ್ಯಾಲಯದಿಂದ ನಿಯಮಾನುಸಾರ ನಿರಪೇಕ್ಷಣಾ ಪತ್ರವನ್ನು ಪಡೆದಿರಬೇಕು. ಸಂಯೋಜಿತ ಕಾಲೇಜುಗಳು ಅಥವಾ ನೋಂದಾಯಿತ ಸಂಸ್ಥೆಗಳು ಸಂಯೋಜನಾ ಅರ್ಜಿಗಳನ್ನು ಸಲ್ಲಿಸುವಾಗ ವಿಶ್ವವಿದ್ಯಾಲಯದ ಪರಿನಿಯಮಾವಳಿಯನ್ವಯ ಅನುಮೋದನೆಗೊಂಡಿರುವ ಪದವಿ ಕೋರ್ಸು/ವಿಷಯ/ಐಚ್ಚಿಕ ವಿಷಯ ಸಮೂಹಗಳಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಐದು ವರ್ಷಗಳ ನಿರಂತರ ತಾತ್ಕಾಲಿಕ ಸಂಯೋಜನೆಯನ್ನು ಪಡೆದ ಕಾಲೇಜುಗಳು ತಮ್ಮ ಅಸ್ತಿತ್ವದಲ್ಲಿರುವ ಕೋರ್ಸು/ವಿಷಯಗಳಿಗೆ ಸ್ಥಳೀಯ ತಪಾಸಣಾ ಸಮಿತಿಗಳು ವಿಧಿಸಿರುವ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಿ, ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಕಾಲಕಾಲಕ್ಕೆ ನಿಗದಿಪಡಿಸುವ ಶೈಕ್ಷಣಿಕ ಗುಣಮಟ್ಟ ಹೊಂದಿರುವ ಹಾಗೂ ನ್ಯಾಕ್ನಿಂದ ಕನಿಷ್ಟ ‘ಸಿ’ ದರ್ಜೆ ಹೊಂದಿರುವ ಕಾಲೇಜುಗಳು ಮಾತ್ರ ಶಾಶ್ವತ ಸಂಯೋಜನೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಬಹುದು. ಕನಿಷ್ಟ 5ವರ್ಷಗಳ ಸಂಯೋಜನೆಯನ್ನು ಪೂರೈಸಿರುವ ಕಾಲೇಜುಗಳು ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲು ಉದ್ದೇಶಿಸಿದಲ್ಲಿ ಅಂತಹ ಸ್ನಾತಕೋತ್ತರ ಪದವಿ ಕೋರ್ಸಿಗೆ ಸಂಬಂಧಿಸಿದ ವಿಷಯದಲ್ಲಿ ಯುಜಿಸಿ ನಿಯಮಗಳನ್ವಯ 04 ಜನ ಅಧ್ಯಾಪಕರು ಹಾಗೂ ಅವರಲ್ಲಿ ಕನಿಷ್ಟ ಇಬ್ಬರು ಪಿಹೆಚ್ಡಿ., ಪದವಿ ಹೊಂದಿದವರಾಗಿರಬೇಕು. ಸದರಿ ಅಧ್ಯಾಪಕರು ಸ್ನಾತಕ ಕೋರ್ಸುಗಳ ಪಾಠ ಪ್ರವಚನಗಳನ್ನು ಮಾತ್ರ ನಡೆಸಬೇಕು. ಸ್ನಾತಕೋತ್ತರ ವ್ಯಾಸಂಗದ ಜೊತೆಗೆ ಸಂಶೋಧನಾ ವ್ಯಾಸಂಗಕ್ಕಾಗಿ ವಿಶ್ವವಿದ್ಯಾಲಯ ಮತ್ತು ಸರ್ಕಾರದ ಮಾರ್ಗಸೂಚಿಗಳನ್ವಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಅಂತಹ ಕಾಲೇಜುಗಳು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಅಪ್ಲೋಡ್ ಮಾಡಿದ ನಂತರ ಡೌನ್ಲೋಡ್ ಮಾಡಿಕೊಂಡು ಅದರ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕವಾಗಿ ದ್ವಿಪ್ರತಿಯಲ್ಲಿ ಕಾಲೇಜು ಅಭಿವೃದ್ಧಿ ಪರಿಷತ್ ಕಚೇರಿಗೆ ಸಲ್ಲಿಸಬೇಕು.
ಹೊಸ ಕಾಲೇಜು ಆರಂಭಿಸಲು ಇಚ್ಚಿಸುವ ನೋಂದಾಯಿತ ಸಂಘ-ಸಂಸ್ಥೆಗಳು ನವೀನ ಸಂಯೋಜನೆ ಮಂಜೂರಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು, ಸರ್ಕಾರದ ಪೂರ್ವಾನುಮತಿಯನ್ನು ಪಡೆಯದ ಹೊರತು ಯಾವುದೇ ಹೊಸ ಕೋರ್ಸ್/ಭಾಷಾ ವಿಷಯ/ಹೆಚ್ಚುವರಿ ಪ್ರವೇಶಾತಿ ಸಂಖ್ಯೆ ಹಾಗೂ ವಿದ್ಯಾರ್ಥಿ ಪ್ರಮಾಣದ ಹೆಚ್ಚಳಕ್ಕೆ ಸಂಯೋಜನೆ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಪರಿಶಿಷ್ಟ ಜಾತಿ/ಪಂಗಡದ ಆಡಳಿತ ಮಂಡಳಿಯವರು ನಡೆಸುವ ಕಾಲೇಜುಗಳು ನಿಗಧಿತ ಸಂಯೋಜನಾ ಶುಲ್ಕದಲ್ಲಿ ಶೇ.50%ರಷ್ಟು ಮಾತ್ರ ಪಾವತಿಸಬಹುದಾಗಿದೆ. (ಅಭಿವೃದ್ದಿ ಮತ್ತು ಸೇವಾಶುಲ್ಕವನ್ನು ಸಂಪೂರ್ಣವಾಗಿ ಪಾವತಿಸಬೇಕು.) ಇದಕ್ಕೆ ಪೂರಕವಾಗಿ ಸಂಬಂಧಿಸಿದ ಇಲಾಖೆಯಿಂದ ಪಡೆದಿರುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಂತಹ ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಶೇ. 50%ರ ವಿನಾಯಿತಿಗೆ ಪರಿಗಣಿಸಲಾಗುವುದಿಲ್ಲ.
ನಿಗಧಿತ ಸಂಯೋಜನಾ ಶುಲ್ಕಗಳ ಮಾಹಿತಿ, ಸ್ನಾತಕೋತ್ತರ ಅರ್ಜಿಗಳ ನಮೂನೆ, ಸಂಯೋಜನೆಗೆ ಸಂಬಂಧಿಸಿದ ಸೂಚನೆ ಹಾಗೂ ಇತರೆ ಮಾಹಿತಿಗಳನ್ನು ವಿಶ್ವವಿದ್ಯಾಲಯದ ಜಾಲ ತಾಣ www.kuvempu.ac.in ದಲ್ಲಿ ಪಡೆಯಬಹುದಾಗಿದ್ದು, ಅನ್ಲೈನ್ ಸಂಯೋಜನೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಲಿಂಕ್ http://www.onlineaffiliation.karnataka.gov.in/Affiliation21_23/ ಗೆ ಲಾಗಿನ್ ಆಗುವುದು. ಶಾಶ್ವತ ಸಂಯೋಜನೆ ಹೊಂದಿರುವ ಕಾಲೇಜುಗಳು ಕೆಲವು ಪದವಿ ಕೋರ್ಸ್. ಐಚ್ಚಿಕ ವಿಷಯ ಮತ್ತು ಭಾಷಾ ವಿಷಯಗಳಲ್ಲಿ ತಾತ್ಕಾಲಿಕ ಸಂಯೋಜನೆ ಪಡೆದಿದ್ದಲ್ಲಿ ಅವುಗಳ ಮುಂದುವರಿಕೆ ಸಂಯೋಜನೆಗಾಗಿ ಪ್ರತ್ಯೇಕವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಸಂಯೋಜನಾ ಅರ್ಜಿ ನಮೂನೆಗಳನ್ನು ಆನ್ಲೈನ್ನಲ್ಲಿ ಅಥವಾ ಖುದ್ದಾಗಿ ಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451 ಇವರಿಗೆ ಸಲ್ಲಿಸಿ, ಆನ್ಲೈನ್ ಅರ್ಜಿಗಳ ಪ್ರತಿಗಳನ್ನು ನಿರ್ದೇಶಕರು, ಕಾಲೇಜು ಅಭಿವೃದ್ಧಿ ಪರಿಷತ್, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರ ಕಚೇರಿಗೆ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ ಮತ್ತು ಸಂಬಂಧಪಟ್ಟ ಸಂಯೋಜನಾ ಶುಲ್ಕಗಳನ್ನು ನೆಫ್ಟ್ ಮೂಲಕ ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ ಶಾಖೆ, ಶಂಕರಘಟ್ಟ ಇವರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಯೋಜನೆ ಖಾತೆ ಸಂಖ್ಯೆ 54023035811 (IFSC Code SBIN0040759)ಗೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಜಮಾ ಮಾಡುವಂತೆ ಸೂಚಿಸಲಾಗಿದೆ. ದಂಡಶುಲ್ಕವಿಲ್ಲದೆ ಮೇ 16 ರೊಳಗಾಗಿ ಹಾಗೂ ರೂ. 10,000/- ದಂಡಶುಲ್ಕದೊಂದಿಗೆ ಮೇ 23 ರೊಳಗಾಗಿ ಹಾಗೂ ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451 ಶಿವಮೊಗ್ಗ ಜಿಲ್ಲೆ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಡಾ|| ಕೆ.ಎನ್.ಶ್ರೀಕಾಂತ್ -9980377886, ಡಾ|| ಹೆಚ್.ಚಂದ್ರಶೇಖರ್- 9739993080 ಗಳನ್ನು ಸಂಪರ್ಕಿಸುವುದು.




