ರೈತರಿಗೆ ರಾಜ್ಯ ಸರ್ಕಾರದಿಂದ ಡಿಸೈಲ್ ಸಬ್ಸಿಡಿ: ರೈತರಿಗೆ ಮೋಸಮಾಡುವವರ ವಿರುದ್ಧ ಕಠಿಣ ಕ್ರಮ – ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ

ಹಾವೇರಿ: ರೈತರಿಗೆ ಮೋಸಮಾಡುವುದನ್ನು ನಾನು ಸಹಿಸುವುದಿಲ್ಲ. ಮೋಸಮಾಡುವ ವ್ಯಕ್ತಿಗಳು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಪ್ರಭಾವಶಾಲಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು.

ರಾಣೇಬೆನ್ನೂರ ನಗರದಲ್ಲಿ ನಿರ್ಮಾಣ ಮಾಡಲಾದ ಉಪಕೃಷಿ ನಿರ್ದೇಶಕರ ನೂತನ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ ಸದೃಢರಾಗಲು ಹಾಗೂ ಸ್ವಾಲಂಬಿಗಳಾಗಿ ಬದುಕಲು ನಮ್ಮ ಸರ್ಕಾರ ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಬೆನ್ನುಲುಬಾಗಿ ನಿಂತು ಕೆಲಸ ಮಾಡುತ್ತಿದೆ. ರೈತರಿಗೆ ಸೌಲಭ್ಯ ಒದಗಿಸುವಲ್ಲಿ ಯಾವುದೇ ಲೋಪವಾಗಬಾರದು ಎಂದು ಹೇಳಿದರು.

ನಾನು ಕೃಷಿ ಸಚಿವನಾಗಿ ಕಾರ್ಯಾರಂಭ ನಂತರ 14 ಸಾವಿರ ಕ್ವಿಂಟಲ್ ಕಳಪೆಬೀಜ ಹಾಗೂ ಕೀಟನಾಶಕ ಪತ್ತೆಹಚ್ಚಲಾಗಿದೆ. ಈವರೆಗೆ ರಾಜ್ಯದಲ್ಲಿ ಈ ಕುರಿತಂತೆ 755 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕಳಪೆ ಬೀಜ, ಕ್ರಿಮಿನಾಶಕ ಮಾರಾಟಮಾಡಿ ಸಿಕ್ಕಿಬಿದ್ದ 148 ಅಂಗಡಿಗಳ ಲೈಸನ್ಸ್ ರದ್ದುಪಡಿಸುವ ಮೂಲಕ ರೈತರಿಗೆ ಮೋಸಮಾಡುವವರನ್ನು ಸಹಿಸುವುದಿಲ್ಲ ಎಂದು ರುಜುವಾತುಪಡಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ನದಾತನ ಬಗ್ಗೆ ವಿಶೇಷ ಕಾಳಜಿಹೊಂದಿವೆ. ರೈತರ ಬದುಕನ್ನು ಹಸನುಮಾಡಲು ಕೃಷಿ ಯಂತ್ರೋಪಕರಣಗಳು, ಗೊಬ್ಬರ, ಬಿತ್ತನೆಬೀಜ, ವಿತರಣೆ ಸೇರಿದಂತೆ ಹಲವು ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

ರಸಗೊಬ್ಬರಕ್ಕೆ ಸಬ್ಸಿಡಿ: ಮುಂಗಾರು ಬಿತ್ತನೆ ಕಾಲ ಸಮೀಪವಾಗುತ್ತಿದೆ. ರೈತರಿಗೆ ಹೊರೆಯಾಗದಂತೆ ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ಸಬ್ಸಿಡಿ ಘೋಷಣೆಮಾಡಿದೆ. 50 ಕೆಜಿ ಡಿಎಪಿ ಗೊಬ್ಬರಕ್ಕೆ ಮೂಲದರ 3850 ರೂ.ಗಳಿದ್ದು, ರೈತರ ನೆರವಿಗೆ ದಾವಿಸಿರುವ ಕೇಂದ್ರ ಸರ್ಕಾರ ರೂ. 2500 ಸಬ್ಸಿಡಿ ಘೋಷಿಸಿದೆ. ಅದೇ ರೀತಿ ಎಂಒಪಿ ಗೊಬ್ಬರದ ದರ 2,459/- ರೂ.ಗಳಿದ್ದು, ರೂ.759 ಸಬ್ಸಿಡಿ ಘೋಷಣೆ ಮಾಡಿದೆ. ಕಾಂಪ್ಲೆಕ್ಸ್ ಗೊಬ್ಬರಕ್ಕೆ ರೂ.3204 ದರವಿದ್ದು, ರೂ.1734 ಸಬ್ಸಿಡಿ ನೀಡಿದೆ. ಯೂರಿಯಾ ಗೊಬ್ಬರದ ಬೆಲೆ ರೂ.1666/-ಗಳಿದ್ದು, ರೂ.1400 ಸಬ್ಸಿಡಿ ನೀಡುತ್ತಿದೆ ಎಂದು ಹೇಳಿದರು.

ದೇಶದಲ್ಲೇ ಮೊದಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಕೃಷಿಯ ಬೆಳವಣಿಗೆ, ರೈತರ ಬದುಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ದೇಶದಲ್ಲೆ ಮೊದಲಬಾರಿಗೆ ನಮ್ಮ ಸರ್ಕಾರ ರೈತರ ಕೃಷಿ ಬಳಕೆಗೆ ಡಿಸೈಲ್ ಸಬ್ಸಿಡಿಯನ್ನು ಘೋಷಣೆಮಾಡಿದೆ. ರಾಜ್ಯದಲ್ಲಿ ರೈತರಿಗೆ ರೂ.1,250 ಡಿಸೈಲ್ ಸಬ್ಸಿಡಿ ನೀಡಲಾಗುತ್ತಿದೆ. ಇದರೊಂದಿಗೆ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ಶ್ರಮಜೀವಿ ರೈತನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ರೈತ ವಿದ್ಯಾನಿಧಿ ಯೋಜನೆಯಡಿ ರೈತ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ರೈತರ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ಕೃಷಿ ಪದವೀಧರರಾಗಬೇಕೆಂಬ ಆಶಯದಿಂದ ಶೇ.40ರಿಂದ ಶೇ.50 ರಷ್ಟು ಪ್ರಮಾಣದಲ್ಲಿ ಹೆಚ್ಚಿಸಿ, ಸೀಟುಗಳನ್ನು ಕಾಯ್ದಿರಿಸಲಾಗಿದೆ. ರಾಜ್ಯದಲ್ಲಿ ಪ್ರಸಕ್ತ 1884 ಸೀಟುಗಳ ಪೈಕಿ 184 ಸೀಟುಗಳು ರೈತರ ಮಕ್ಕಳ ಪ್ರವೇಶಕ್ಕೆ ಲಭಿಸಿವೆ ಎಂದರು.

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಕೃಷಿ ಮೂಲ ಸೌಕರ್ಯಕ್ಕೆ ಒಂದು ಲಕ್ಷಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಪೈಕಿ 10 ಸಾವಿರ ಕೋಟಿ ಮೊತ್ತವನ್ನು ಆತ್ಮನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳಿಗೆ ಮೀಸಲಿಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳ ಸಂಸ್ಕರಣೆಮಾಡಿ ಬ್ರಾಂಡಿಂಗ್ ಮಾಡಿ ಮಾರಿದರೆ ಉತ್ತಮ ಬೆಲೆ ಪಡೆಯಬಹುದು. ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಕೇಂದ್ರ ಶೇ.35 ರಷ್ಟು ಹಾಗೂ ರಾಜ್ಯ ಶೇ.15 ರಷ್ಟು ಸಬ್ಸಿಡಿ ಸೇರಿ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ರೂ.10 ಲಕ್ಷ ವೆಚ್ಚದ ಘಟಕ್ಕೆ ರೂ.5 ಲಕ್ಷ ಸಬ್ಸಿಡಿ ದೊರೆಯಲಿದೆ ಎಂದರು.

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೇವಲ ಒಂದೇ ಬೆಳೆ ಬೆಳೆದರೆ ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಒಂದೆ ಬೆಳೆ ಬೆಳೆಯುವ ಬದಲು ಏಳೆಂಟು ಬೆಳೆಗಳನ್ನು ಬೆಳೆದಾಗ ಒಂದೆರಡು ಬೆಳೆಗಳು ಕೈಕೊಟ್ಟರು ಉಳಿದ ಬೆಳೆರಗಳು ರೈತನ ಕೈಹಿಡಿಯಲಿವೆ. ಇದರಿಂದ ಆರ್ಥಿಕ ಅಭಿವೃದ್ಧಿ ಹಾಗೂ ಆದಾಯ ದ್ವಿಗುಣಮಾಡಿಕೊಳ್ಳಬಹುದು. ಜೊತೆಗೆ ಉಪ ಕಸಬುಗಳಾದ ಹೈನುಗಾರಿಕೆ, ಕೋಳಿ, ಕುರಿ, ಜೇನು ಸಾಕಾಣಿಕೆ ಮಾಡಬೇಕು ಎಂದು ಸಲಹೆ ನೀಡಿದರು.

About The Author