ಬೆಂಗಳೂರು: ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನ ಅನೇಕ ಕಡೆಗಳಲ್ಲಿ ಕೆರೆಯಂತೆ ಆಗಿದೆ. ಅನೇಕ ಏರಿಯಾಗಳು ಸಂಪೂರ್ಣ ಜಲಾವೃತಗೊಂಡು, ಜನರು ಮನೆಯಿಂದ ಹೊರ ಬಾರದಂತೆ ಆಗಿದೆ.
ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿತ್ತು. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಸಂಬಂಧಿಸಿದಂತ ಇಲಾಖೆಗೆ ಸೂಚನೆ ನೀಡಿತ್ತು. ಆದ್ರೇ.. ಆ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದ ಕಾರಣ, ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡು ನದಿಯಾಗಿ ನೀರು ರಸ್ತೆಯಲ್ಲಿ ಹರಿಯುವಂತೆ ಆಗಿದೆ.
ಇನ್ನೂ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ, ಕೆರೆಯಾಗಿ ಏರ್ಪಟ್ಟಿದೆ. ಮನೆ, ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿದ ಪರಿಣಾಮ, ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಮನೆಯಲ್ಲಿದ್ದಂತ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಕೆಲವೆಡೆ ನೀರು ಮಾರುದ್ಧ ನಿಂತ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಿ ಹಾಳಾಗುವಂತೆ ಆಗಿದೆ.
ಅಂದಹಾಗೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ, ನಿನ್ನೆ ಒಂದೇ ದಿನ ಸುಮಾರು 120 ಮಿಲಿ ಮೀಟರ್ ಮಳೆ ಬೆಂಗಳೂರಿನಲ್ಲಿ ಸುರಿದದ್ದೇ ಆಗಿದೆ. ಏರ್ಪೋರ್ಟ್ ರಸ್ತೆಯೆಲ್ಲಾ ನೀರುಮಯವಾದ ಕಾರಣ ವಾಹನಗಳು ಸಾಲುಗಟ್ಟಿ ನಿಂತಿದೆ. ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲು ಆಗದೇ ಪ್ರಯಾಣಿಕರು ಫ್ಲೈಟ್ ಮಿಸ್ ಮಾಡಿಕೊಳ್ಳುವಂತೆ ಆಗಿದೆ.




