ಮಳೆಯಿಂದ‌ ತೊಂದರೆಗೊಳಗಾದ ಕುಟುಂಬಗಳಿಗೆ ಪರಿಹಾರ; ಸಿಎಂ ಜೊತೆ ಚರ್ಚೆ- ಕೆ.ಗೋಪಾಲಯ್ಯ

ಬೆಂಗಳೂರು ; ಮಳೆಯಿಂದ‌ ತೊಂದರೆ ಗೊಳಗಾಗಿರುವವರಿಗೆ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 800 ಕ್ಕೂ ಅಧಿಕ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಮಂಗಳವಾರ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೀರು ನುಗ್ಗಿ ತೊಂದರೆಗೊಳಗಾದ ಮಹಾಲಕ್ಷ್ಮಿ ಲೇ‌ಔಟ್ ವಿಧಾನಸಭಾ ಕ್ಷೇತ್ರದ ಅನೇಕ ಬಡಾವಣೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಕಮಲಾ‌ನಗರ, ನಂದಿನಿ ಬಡಾವಣೆ, ಕಂಠೀರವ ನಗರ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಸುದ್ದಿ ನಿನ್ನೆ ಮಧ್ಯರಾತ್ರಿಯೇ ತಿಳಿಯಿತು. ತಕ್ಷಣವೇ ಬಿಬಿಎಂಪಿ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳ‌ ಜೊತೆ ಆಗಮಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸರಿ ಸುಮಾರು 850 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿದ್ದು, ಅಡಿಗೆ ಮಾಡಿಕೊಳ್ಳಲು ಜನರು ಪರಿತಪಿಸಬೇಕಾದ ಸ್ಥಿತಿ ‌ನಿರ್ಮಾಣ ವಾಗಿತ್ತು. ಈ ಎಲ್ಲ ಕುಟುಂಬಗಳಿಗೆ ತಕ್ಷಣವೇ ಬೆಳಗಿನ ತಿಂಡಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಇಂದು ಮುಖ್ಯಮಂತ್ರಿ ಗಳು ಬಡಾವಣೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಈ ವೇಳೆ ಸಂತ್ರಸ್ತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದಲ್ಲದೇ ನಿರಾಶ್ರಿತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಹಲವೆಡೆ ಕೈ ಗೊಂಡಿರುವ ಒಳಚರಂಡಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು‌ ತ್ವರಿತವಾಗಿ ಮುಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಆದಷ್ಟು ಶೀಘ್ರವೇ ತಡಗೋಡೆ ನಿರ್ಮಾಣ ಕಾಮಗಾರಿ ಮುಗಿಯಲಿದೆ ಎಂದರು.

ಇದಕ್ಕೂ ಮುನ್ನ ಸಚಿವರು ಬಿಬಿಎಂಪಿ ಅಧಿಕಾರಿಗಳು ಮತ್ತು ಇಂಜಿನಿಯರ‌್ ಗಳೊಂದಿಗೆ ಕಮಲಾನಗರ, ನಂದಿನಿ‌ ಬಡಾವಣೆ,ಕಂಠೀರವ ನಗರ,ವೃಷಭಾವತಿ ನಗರ,ಜೆಸಿ ನಗರ, ಕೆರಯಂಗಳ,ಚಂದ್ರಪ್ಪ ರಸ್ತೆಗಳಲ್ಲಿ ತೊಂದರೆಗೊಳಗಾಗಿರುವ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು.

About The Author