BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಿರಿಯ ಲೇಖಕ ಡಿ.ಎಸ್ ನಾಗಭೂಷಣ ನಿಧನ

ಬೆಂಗಳೂರು: ಹಿರಿಯ ಲೇಖಕರು, ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ನಮ್ಮನ್ನು ಅಗಲಿದ್ದಾರೆ. ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭ್ಯವಾಗಿದೆ.ನೇರ ನಡೆ,ನುಡಿ,ನಿಷ್ಠುರ ವ್ಯಕ್ತಿ ತ್ವದ ಡಿಎಸ್ ಎನ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ, ಪ್ರಾಮಾಣಿಕತೆಗೆ ಮಾದರಿಯಾಗಿದ್ದರು.ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯದ ಕುರಿತು ಅಪಾರವಾದ ತಿಳವಳಿಕೆ, ಪಾಂಡಿತ್ಯ ಹೊಂದಿದ್ದ ನಾಗಭೂಷಣ್ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು.

ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ಈಚೀನ ವರ್ಷಗಳಲ್ಲಿ ಗಾಂಧೀವಾದದ ಕಡೆ ಹೆಚ್ಚು ಒಲವು ತೋರಿದ್ದರು. ಜಾಗತೀಕರಣ ತಂದಿರುವ ವಿಸ್ಮೃತಿಗಳನ್ನು ಎದುರಿಸಲು ಗಾಂಧೀ ಪ್ರತಿಪಾದಿಸಿದ ಸರಳ, ಸಭ್ಯ , ಕಡಿಮೆ ಅವಶ್ಯಕತೆಗಳ ಬದುಕು ನಮ್ಮದಾಗಬೇಕು ಎಂದು ಬಯಸಿದ್ದರು.

ಪ್ರತಿವರ್ಷ ಅಕ್ಟೋಬರ್ ನಲ್ಲಿ ಲೋಹಿಯಾ ಪ್ರತಿಷ್ಠಾನದ ಮೂಲಕ ಕುಪ್ಪಳ್ಳಿಯಲ್ಲಿ ಅವರು ಆಯೋಜಿಸುತ್ತಿದ್ದ ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಜನರಲ್ಲಿ ಗಾಂಧಿ, ಲೋಹಿಯಾ, ಅಂಬೇಡ್ಕರ್, ಜೆ.ಪಿ.ಚಿಂತನೆಯನ್ನು ತಲುಪಿಸಲು ಉತ್ಸುಕರಾಗಿದ್ದರು.

ಮೇಲ್ನೋಟಕ್ಕೆ ಒರಟು ಸ್ವಭಾವದವರಂತೆ ಕಾಣುತ್ತಿದ್ದ ಡಿಎಸ್ ಎನ್ ಆಳದಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಬಲಪಂಥೀಯ ರಾಜಕಾರಣದ ದೋಷಗಳನ್ನು ಗುರುತಿಸಿ ಟೀಕಿಸುವಷ್ಟೆ ಪ್ರಖರತೆಯನ್ನು ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತೂ ತೋರುತ್ತಿದ್ದರು.

ನಾಗಭೂಷಣ್ ರ ಎಲ್ಲ ಸಮಾಜಮುಖಿ ಕೆಲಸಗಳ ಹಿಂದೆ ಗಟ್ಟಿಯಾಗಿ ನಿಂತವರು ಅವರ ಪತ್ನಿ ಕವಯತ್ರಿ ಸವಿತಾ ನಾಗಭೂಷಣ.

About The Author