ಬೆಂಗಳೂರು: ವಿಜಯೇಂದ್ರಗ ಟಿಕೆಟ್ ತಪ್ಪಿರೋದರ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮುಂದೆ ಅವರಿಗೆ ಬೇರೆ ಬೇರೆ ಅವಕಾಶಗಳು ಇದ್ದಾವೆ. ಇವಾಗ ಅವ್ರು ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಮುಂದೆ ಅವರಿಗೆ ಬೇರೆ ಬೇರೆ ಅವಕಾಶ ಗಳನ್ನು ಹೈಕಮಾಂಡ್ ಮಾಡಿಕೊಡುತ್ತದೆ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಬಳಿಯಲ್ಲಿ ಪುತ್ರನ ಟಿಕೆಟ್ ತಪ್ಪಿದ್ದರ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಅವರು, ಸಾಮರ್ಥ್ಯ ಮತ್ತು ಪಕ್ಷದಲ್ಲಿ ನಿಷ್ಠೆ ಇರುವವರಿಗೆ ಪಕ್ಷ ಯಾವತ್ತೂ ಕೈಬಿಡಲ್ಲ. 2023ಕ್ಕೆ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ನಮ್ಮಗುರಿಯಾಗಿದೆ. ಆ ದಿಕ್ಕಿನಲ್ಲಿ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೋ ಅದನ್ನು ಈಗಿಂದಲೇ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಮೋದಿಯವರ ನೇತೃತ್ವದಲ್ಲಿ ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ, ಮತ್ತೆ ಅಧಿಕಾರಕ್ಕೆ ಬರ್ತೇವೆ ಎಂದರು.
ಟಿಕೆಟ್ ತಪ್ಪಿರುವುದಕ್ಕೂ ಬಿ ಎಲ್ ಸಂತೋಷ್ ಅವರಿಗೂ ಸಂಬಂಧ ಇಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಅವರ ಹೆಸರು ಬರುತ್ತಿದೆ. ಇದರಲ್ಲಿ ಏನೂ ಅರ್ಥ ಇಲ್ಲ ಎಂದು ಹೇಳಿದರು.




