ಬೆಂಗಳೂರು: ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಂದಿನ ಕ್ರಮಕ್ಕಾಗಿ ವಿಚಾರಣೆ ವೇಳೆ ಲಭ್ಯವಾದ ದಾಖಲೆಗಳ ಸಹಿತ ವರದಿಯನ್ನು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ದಿನಾಂಕ:12-05-2022 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಸಂದರ್ಭದಲ್ಲಿ ದಿನಾಂಕ:16-05-2022 ರಂದು ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್. ಅಶ್ವಥ್ನಾರಾಯಣ್ರವರು ಮಂಡ್ಯ ನಗರದ ಮಿಮ್ಸ್, ಮಹಿಳಾ ಸರ್ಕಾರಿ, ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಭೇಟಿ ನೀಡಿ, ಕಾಲೇಜುಗಳಲ್ಲಿ ಸಭೆಗಳನ್ನು ಆಯೋಜಿಸುವುದರ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಮಂಡ್ಯ ನಗರದ ಮಿಮ್ಸ್ ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಭೇಟಿ ನೀಡಿ, ಹೇಳಿಕೆ ಹಾಗೂ ವರದಿಯನ್ನು ಪಡೆದಿದ್ದಾರೆ.
ಇದೇ ವೇಳೆ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರ ಕಚೇರಿಯಿಂದ ದಿನಾಂಕ:15-05-2022ರಂದು ಹೊರಡಿಸಲಾಗಿದ್ದ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಚುನಾವಣೆ ಸಂಬಂಧಿತ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಿರುವುದು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಳಸಿ ಚುನಾವಣೆ ಪ್ರಚಾರ ಮಾಡಿರುವುದು ತಿಳಿದು ಬಂದಿದ್ದು, ಇದು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ವಿಷಯವನ್ನು ತಮ್ಮ ಅವಗಾಹನೆಗೆ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸುತ್ತಾ, ಸಂಬಂಧಪಟ್ಟ ಉಲ್ಲೇಖಿತ ಪತ್ರಗಳನ್ನು ಲಗತ್ತಿಸಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ.
ಪತ್ರದ ಸಾರಾಂಶ ಇಂತಿದೆ
ಮೇಲ್ದಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ(1)ರ ಪತ್ರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯರವರ ಅಧಿಕೃತ ಜ್ಞಾಪನ ಪತ್ರದನ್ವಯ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ದಿನಾಂಕ:12-05-2022 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಸಂದರ್ಭದಲ್ಲಿ ದಿನಾಂಕ:16-05-2022 ರಂದು ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್. ಅಶ್ವಥ್ನಾರಾಯಣ್ರವರು ಮಂಡ್ಯ ನಗರದ ಮಿಮ್ಸ್, ಮಹಿಳಾ ಸರ್ಕಾರಿ, ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಭೇಟಿ ನೀಡಿ, ಕಾಲೇಜುಗಳಲ್ಲಿ ಸಭೆಗಳನ್ನು ಆಯೋಜಿಸುವುದರ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆಂದು ಪ್ರಧಾನ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಇವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತಾರೆ.
ಸದರಿ ದೂರಿನ ಕುರಿತು ಮಂಡ್ಯ ತಾಲ್ಲೂಕಿನ ಮಾದರಿ ನೀತಿ ಸಂಹಿತೆಯ ತಂಡದಿಂದ ವರದಿ ಪಡೆಯಲಾಗಿದ್ದು, ಉಲ್ಲೇಖಿತ (2) ರನ್ವಯ ಸದರಿರವರು ನೀಡಿರುವ ವರದಿಯಲ್ಲಿ ಮಂಡ್ಯ ನಗರದ ಮಿಮ್ಸ್ ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ರವರು ದಿನಾಂಕ: 16-05-2022 ರಂದು ಭೇಟಿ ನೀಡಿರುತ್ತಾರೆ.
ಈ ಬಗ್ಗೆ ನಮಗೆ ಮುಂಚಿತವಾಗಿ ಯಾವುದೇ ರೀತಿಯ ಮಾಹಿತಿಯು ಅಧಿಕೃತವಾಗಿ ಬಂದಿರುವುದಿಲ್ಲ. ಆದ್ದರಿಂದ, ದೂರಿನ ಹಿನ್ನೆಲೆಯಲ್ಲಿ ಮಾಹಿತಿ ತಿಳಿದ ತಕ್ಷಣ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ, ಪ್ರಾಂಶುಪಾಲರನ್ನು ಭೇಟಿ ಮಾಡಿ ವಿಚಾರಿಸಿದಾಗ ದಿನಾಂಕ: 16-05-2020 ರಂದು ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ನಾರಾಯಣ್ರವರು ಕಾಲೇಜಿಗೆ ಭೇಟಿ ನೀಡಿದ್ದು, ಯಾವುದೇ ಸಮಾವೇಶವನ್ನು ಮಾಡಿರುವುದಿಲ್ಲ ಹಾಗೂ ಸಚಿವರಿಗೆ ಯಾವುದೇ ಆತಿಥ್ಯವನ್ನಾಗಲಿ ನೀಡಿರುವುದಿಲ್ಲ ಎಂದು ಮಾಹಿತಿಯನ್ನು ನೀಡಿರುತ್ತಾರೆ. ಸದರಿರವರು ನೀಡಿರುವ ಲಿಖಿತ ಹೇಳಿಕೆ ಪತ್ರವನ್ನು ಲಗತ್ತಿಸಿದೆ.
ಅದೇ ರೀತಿ ಮಂಡ್ಯ ನಗರದ ಮಿಮ್ಸ್, ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ, ಮಂಡ್ಯ ವಿಶ್ವವಿದ್ಯಾಲಯ ಕಾರ್ಯಕ್ರಮ ಸಂಯೋಜಕರು ತಮ್ಮ ಲಿಖಿತ ಹೇಳಿಕೆಯಲ್ಲಿ ದಿನಾಂಕ:16-05-2022 ರಂದು ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ರವರು ನಮ್ಮ ಕಾಲೇಜಿಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರನ್ನು ಭೇಟಿ ಮಾಡಲು ಬಂದಿದ್ದು, ಈ ಸಂಧರ್ಭದಲ್ಲಿ ಶಾಲೆಯ ಕಾರ್ಯಕ್ರಮ ನಡೆಯುತ್ತಿದ್ದದನ್ನು ಗಮನಿಸಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ರಾಷ್ಟ್ರೀಯ ನೀತಿ ಶಿಕ್ಷಣ ಹಾಗೂ ಕಂಪ್ಯೂಟರ್ ತರಬೇತಿ ವಿಷಯಗಳ ಬಗ್ಗೆ ಸಂವಾದ ನಡೆಸಿರುತ್ತಾರೆ.
ಈ ಸಂದರ್ಭದಲ್ಲಿ ದಕ್ಷಿಣ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮತಯಾಚನೆ ಮಾಡಿರುವುದಿಲ್ಲ ಎಂದು ತಮ್ಮ ಉಲ್ಲೇಖಿತ (3)ರ ಪತ್ರದಲ್ಲಿ ತಿಳಿಸಿರುತ್ತಾರೆ. ಮುಂದುವರೆದು, ಕುಲಸಚಿವರು (ಪರೀಕ್ಷಾಂಗ), ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯರವರು ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರು ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಅವರನ್ನು ವಿಶ್ವವಿದ್ಯಾಲಯದ ದ್ವಾರದಲ್ಲಿ ಔಪಚಾಲಕವಾಗಿ ಬರಮಾಡಿಕೊಳ್ಳಲಾಗಿದ್ದು, ಮಾನ್ಯ ಸಚಿವರು ಹೊಸ ಶಿಕ್ಷಣ ನೀತಿಯ ಮೊದಲ ಪರೀಕ್ಷೆಗಳ ಬಗ್ಗೆ ತಮ್ಮಿಂದ ಕೆಲವು ಮಾಹಿತಿಯನ್ನು ಮೌಖಿಕವಾಗಿ ಹೇಳಿಕೆ ಪಡೆದುಕೊಂಡಿದ್ದು, ಮಾನ್ಯ ಭೇಟಿಯ ಸಂದರ್ಭದಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮವನ್ನಾಗಲಿ ಅಥವಾ ಸಭೆಯನ್ನಾಗಲಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವುದಿಲ್ಲ ಎಂದು ತಮ್ಮ ಉಲ್ಲೇಖಿತ (3)ರ ಪತ್ರದಲ್ಲಿ ತಿಳಿಸಿರುತ್ತಾರೆ.
ಸದರಿ ದೂರಿನ ಬಗ್ಗೆ ಉಪ ವಿಭಾಗಾಧಿಕಾರಿ ಮಂಡ್ಯ ಉಪ ವಿಭಾಗ ಹಾಗೂ ತಹಶೀಲ್ದಾರ್ ಮಂಡ್ಯ ತಾಲ್ಲೂಕು ಇವರುಗಳಿಂದ ವರದಿಯನ್ನು ಪಡೆಯಲಾಗಿದ್ದು, ಸದರಿ ವರದಿಯಲ್ಲಿ ಮಾನ್ಯ ಸಚಿವರಿಗೆ ಯಾವುದೇ ಶಿಷ್ಟಾಚಾರ ಪಾಲನೆ ಕಲ್ಪಿಸಿರುವುದಿಲ್ಲವೆಂದು ಉಲ್ಲೇಖಿತ (4) ಮತ್ತು (5)ರ ಪತ್ರಗಳಲ್ಲಿ ತಿಳಿಸಿರುತ್ತಾರೆ. ಚುನಾವಣೆಗೆ ಸಂಬಂಧಿಸಿದ ಎಫ್.ಎಸ್.ಟಿ ತಂಡದವರು ಉಲ್ಲೇತ (7) ರಲ್ಲಿ ವರದಿ ಸಲ್ಲಿಸಿದ್ದು, ಮೇಲ್ಕಂಡ ಅಂಶಗಳನ್ನು ಪುನರುಚ್ಚರಿಸಿರುತ್ತಾರೆ.
ಮೇಲ್ದಂಡ ಅಂಶಗಳನ್ನು ಗಮನಿಸಿದಾಗ ಎಫ್.ಎಸ್.ಟಿ ಹಾಗೂ ತಾಲ್ಲೂಕು ಎಂ.ಸಿ.ಪಿ ತಂಡದ ವರದಿಯಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.
1. ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರು ದಿನಾಂಕ: 16-05-2022 ರಂದು ಮಂಡ್ಯ ನಗರದ ಮಿಮ್ಸ್, ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ, ಮಂಡ್ಯ ವಿಶ್ವವಿದ್ಯಾನಿಲಯ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಬೇಟಿ ನೀಡಿರುವುದು ಕಂಡು ಬರುತ್ತದೆ.
2. ಸದರಿ ಸಂಸ್ಥೆಗಳಗೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರು ಖಾಸಗಿ ವಾಹನದಲ್ಲಿ ಭೇಟಿ ನೀಡಿರುವುದು ಉಪವಿಭಾಗಾಧಿಕಾರಿಗಳು, ಮಂಡ್ಯ, ತಹಶೀಲ್ದಾರ್ ಮಂಡ್ಯರವರ ವರದಿಗಳಿಂದ ಹಾಗೂ ದೂರುದಾರರು ಹಾಜರುಪಡಿಸಿರುವ ಸಿ.ಡಿ.ಯನ್ನು ವೀಕ್ಷಿಸಿದಾಗ ತಿಳಿದುಬಂದಿರುತ್ತದೆ.
3. ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರು ದಿನಾಂಕ: 16-05-2022 ರಂದು ಸದರಿ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮತದಾರರ ಭೇಟಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ದಿನಾಂಕ: 15-05-2022ರ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಹಾಗೂ ದೂರುದಾರರು ನೀಡಿರುವ ಸಿ.ಡಿಯನ್ನು ಪರಿಶೀಲಿಸಿ ಐಎಸ್ಟಿ ತಂಡ ನೀಡಿರುವ ವರದಿಯಿಂದ ಕಂಡುಬಂದಿರುತ್ತದೆ.
4. ಸದರಿ ಸಂಸ್ಥೆಯ ಮುಖ್ಯಸ್ಥರು ನೀಡಿರುವ ಪತ್ರಗಳನ್ವಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ|ಸಿ.ಎನ್. ಅಶ್ವಥ್ನಾರಾಯಣ್ ರವರು ಯಾವುದೇ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ.
5. ECI No: 322/ECI/INST/FUNC/BIEN-LC/2016, Dated:26-12-2016, SL No-03(1)(b) ರನ್ವಯ “Official Visit Shall not be combined with the election related work/tours” ಎಂದು ನಮೂದಾಗಿರುತ್ತದೆ. ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರ ವಿನಾಂಕ: 15-05-2022ರ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮದನ್ವಯ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತದಾರರ ಭೇಟಿ ಮತ್ತು ಸಂವಾದದಲ್ಲಿ ಭಾಗವಹಿಸುವುದಾಗಿ ತಿಳಸಲಾಗಿರುತ್ತದೆ. ಇದರಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮದ ಬಗ್ಗೆ ನಮೂದಾಗಿರುವುದಿಲ್ಲ.
6. “MCC for the guidance of political parties and candidate’s SL No-VII Party in power (1) (a) ರನ್ವಯ The Ministers Shall not combine their official visit with electioneering work and shall not also make use of official machinery or personnel during the electioneering work ” ಎಂದು ತಿಳಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ನಾರಾಯಣ್ ರವರ ಕಚೇರಿಯಿಂದ ದಿನಾಂಕ:15-05-2022 ರಂದು ಹೊರಡಿಸಲಾದ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಚುನಾವಣೆ ಸಂಬಂಧಿತ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಿರುವುದು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಳಸಿ ಚುನಾವಣೆ ಪ್ರಚಾರ ಮಾಡಿರುವುದು ತಿಳಿದು ಬಂದಿರುವುದರಿಂದ ಇದು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ವಿಷಯವನ್ನು ತಮ್ಮ ಅವಗಾಹನೆಗೆ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸುತ್ತಾ, ಸಂಬಂಧಪಟ್ಟ ಉಲ್ಲೇಖಿತ ಪತ್ರಗಳನ್ನು ಲಗತ್ತಿಸಿದೆ.




