ಅಪ್ಪು ಅವರು ಕನ್ನಡ ಚಿತ್ರರಂಗದ ಅದ್ಬುತ ಕಲಾವಿದ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದು, ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಪುನೀತ್ ಅವರು ‘ಅಪ್ಪು’ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ ಅಗಲಿದ ಬಳಿಕ ಅಪ್ಪು ಅಭಿಮಾನಿಗಳೇ ಸ್ವಯಂ ಪ್ರೇರಿತರಾಗಿ ತಮ್ಮ ಊರಿನ ರಸ್ತೆಗಳಿಗೆ, ಸರ್ಕಲ್‌ಗಳಿಗೆ ಹೆಸರಿಟ್ಟಿದ್ದನ್ನು ನೋಡಿದ್ದೇವೆ. ಹಾಗೆಯೇ ಬೆಂಗಳೂರಿನ ಯಾವುದಾದರೂ ಒಂದು ರಸ್ತೆಗೆ ಅವರ ಹೆಸರಿಡಬೇಕು ಎಂಬ ಮಾತು ಕೇಳಿಬರುತ್ತಿತ್ತು. ಹಾಗಾಗಿ ಕೆಲವು ತಿಂಗಳುಗಳ ಹಿಂದೆಯೇ ಬೆಂಗಳೂರಿನ ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌ಆರ್ ರಮೇಶ್ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದರು.
ಇದೀಗ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ “ಕರ್ನಾಟಕ ರತ್ನ ಡಾll ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡಲಾಗಿದ್ದು, ಈಗ ನಾಮಫಲಕವನ್ನು ಅಳವಡಿಸಲಾಗಿದೆ. ಇದು ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್, ಕದಿರೇನಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್ ಮಾರ್ಗವಾಗಿ ಜೆಪಿ ನಗರ ಹಾಗೂ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಜಂಕ್ಷನ್ ತಲುಪಲಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

