ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿಯಾದ ಮಾಜಿ ಸಚಿವ ಹೆಚ್ ಡಿ ರೇವಣ್ಣ: ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಮನವಿ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿ ಪಕ್ಷದ ಮೂರನೇ ಅಭ್ಯರ್ಥಿ, ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿ ಹಾಗೂ ಜೆಡಿಎಸ್ ನ ಒರ್ವ ಅಭ್ಯರ್ಥಿಗೆ ಮತಗಳ ಕೊರತೆ ಇದೆ. ಯಾವುದಾದರೂ ಒಂದು ಪಕ್ಷದ ಬೆಂಬಲ ದೊರೆತರೆ ಮಾತ್ರವೇ ಗೆಲುವು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿಯೇ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಇದು ರಾಜ್ಯಸಭೆಯ ರಣಾಂಗಣದಲ್ಲಿ ರೋಚಕ ಟ್ವಿಸ್ಟ್ ಪಡೆದಿದೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಗಾಗಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಲೇಹರ್ ಸಿಂಗ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್ ನಿಂದ ಜೈರಾಂ ರಮೇಶ್ ಹಾಗೂ ಮನ್ಸೂರ್ ಆಲಿ ಖಾನ್ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಆದ್ರೇ.. ಮೂರು ಪಕ್ಷಗಳಿಗೆ ಕೊನೆಯ ಅಭ್ಯರ್ಥಿ ಗೆಲುವಿಗೆ ಮತ್ತೊಂದು ಪಕ್ಷದ ಮತಗಳು ಅಗತ್ಯವಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಇಂದು ಭೇಟಿಯಾಗಿದ್ದಾರೆ. ಎರಡನೇ ಅಭ್ಯರ್ಥಿಯಾಗಿ ನಿಲ್ಲಿಸಿರುವಂತ ನಿಮ್ಮ ಅಭ್ಯರ್ಥಿಯನ್ನು ಕೈಬಿಟ್ಟು, ನಮ್ಮ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಅಂದಹಾಗೇ ಈಗಾಗಲೇ ಹೆಚ್ ಡಿ ರೇವಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿಸೋ ಮೊದಲೇ ಭೇಟಿಯಾಗಿ, ನಮ್ಮ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದ್ದರು. ಹೀಗಿದ್ದೂ ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ಹೆಚ್ ಡಿ ರೇವಣ್ಣ ಗರಂ ಕೂಡ ಆಗಿದ್ದರು.

About The Author