ಬೆಂಗಳೂರು: ಘಟಕಗಳಲ್ಲಿ ಹಾಗೂ ವಿಭಾಗದ ಮಟ್ಟದಲ್ಲಿ ಹೊಸ ಉಪಕ್ರಮಗಳನ್ನು ಮತ್ತು ಅತ್ಯುತ್ತಮ ಕೌಶಲ್ಯತೆಯನ್ನು ಅನುಷ್ಠಾನಗೊಳಿಸಿರುವ ಸಿಬ್ಬಂದಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಕೆ ಎಸ್ ಆರ್ ಟಿ ಸಿ ಮುಂದಾಗಿದೆ. ಈ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ನೌಕರರು ಹೊಸ ವಿನೂತನ ಉಪಕ್ರಮ, ಅತ್ಯುತ್ತಮ ಕೌಶಲ್ಯವನ್ನು ಹೊರೆ ಹಚ್ಚಿ ತೋರಿಸಿದ್ರೇ.. ಗೌರವಿಸಿ, ಪ್ರೋತ್ಸಾಹಿಸಲು ನಿಗಮ ಮುಂದಾಗಿದೆ.
ಕೆ ಎಸ್ ಆರ್ ಟಿಸಿಯಿಂದ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ನಿಗಮದ ಕಾರ್ಯವ್ಯಾಪ್ತಿಯಲ್ಲಿ ಘಟಕ/ವಿಭಾಗ ಮಟ್ಟದಲ್ಲಿ ನಿರ್ದಿಷ್ಟಪಡಿಸಿದ ಕೆಲಸ/ಕಾರ್ಯಗಳನ್ನು ಅಧಿಕಾರಿ/ಸಿಬ್ಬಂದಿಗಳು ಉತ್ತಮವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಕೆಲವೊಂದು ವಿಭಾಗಗಳಲ್ಲಿ ಅದರಲ್ಲಿಯೂ ಇತ್ತೀಚೆಗೆ ಪುತ್ತೂರು ವಿಭಾಗ, ಸುಳ್ಯ ಘಟಕದ ತಾಂತ್ರಿಕ ವಿಭಾಗದಲ್ಲಿ ಹೊಸ ಉಪಕ್ರಮವನ್ನು ಜಾರಿಗೆ ತಂದಿದ್ದು, ಹೊಸ ಉಪಕ್ರಮಗಳನ್ನು ಮತ್ತು ಅತ್ಯುತ್ತಮ ಕೌಶಲ್ಯತೆಯನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಎಂದಿದೆ.
ನಿಗಮದ ಇತರೆ ವಿಭಾಗ ಹಾಗೂ ಘಟಕಗಳಲ್ಲಿಯೂ ಸಹ ಈ ಮಾದರಿಯ ಉತ್ತಮ ಉಪಕ್ರಮಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತೇಜಿಸುವ ನಿಟ್ಟಿನಲ್ಲಿ ವಾಹನಗಳ ದುರಸ್ತಿ, ಟೈರ್, ಟ್ಯೂಬ್‌ಗಳ ಬಳಕೆ, ಇಂಧನ ಉಳಿತಾಯ, ನೀರಿನ ಕ್ಷಮತೆ ಹೆಚ್ಚಿಸುವುದು, ಸಿಬ್ಬಂದಿಗಳ ಹಾಜರಾತಿಯಲ್ಲಿ ಗಣನೀಯ ಪ್ರಗತಿ, ಸಿಬ್ಬಂದಿ ಸ್ನೇಹಿ ಬಸ್ಸುಗಳ ಯಶಸ್ವಿ ಕಾರ್ಯಾಚರಣೆ, ಆರ್ಥಿಕ ಉಳಿತಾಯ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳಲ್ಲಿ ಅತ್ಯುತ್ತಮ ಹಾಗೂ ಗಣನೀಯ ಸಾಧನೆ ಮಾಡಿರುವ ಅಧಿಕಾರಿ/ಸಿಬ್ಬಂದಿಗಳ ಕಾರ್ಯವನ್ನು ಕೇಂದ್ರ ಕಛೇರಿ ಮಟ್ಟದಲ್ಲಿ ಗುರುತಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಗೌರವಿಸಲಾಗುವುದು ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ತಮ್ಮ ವಿಭಾಗ/ಘಟಕದ ವ್ಯಾಪ್ತಿಯಲ್ಲಿ ಹೊಸ ಉಪಕ್ರಮಗಳು ಹಾಗೂ ಯಾವುದೇ ಉತ್ತಮ ಪದ್ದತಿಗಳನ್ನು ಆಚರಣೆಗೆ ತಂದು ಯಶಸ್ವಿಯಾಗಿದಲ್ಲಿ, ಸದರಿ ಉಪಕ್ರಮದ ಮಾಹಿತಿಯನ್ನು ಛಾಯಾ ಚಿತ್ರದೊಂದಿಗೆ ಈ ಕೆಳಕಂಡ ಅಂಶಗಳಡಿಯಲ್ಲಿ ಒದಗಿಸಲು ತಿಳಿಸಿದೆ.
- ಉಪಕ್ರಮದ ಹೆಸರು ಮತ್ತು ವಿವರ– Name and Details of the Best Practice/initiative
- ಉಪಕ್ರಮದ ಮೊದಲ ಸ್ಥಿತಿ -Situation before the Initiative.
- ಉಪಕ್ರಮದ ನಂತರದ ಸ್ಥಿತಿ – Situation after the Initiative.
- ಉಪಕ್ರಮದಿಂದ ನಿಗಮಕ್ಕೆ ಆದ ಲಾಭದ ವಿವರ: Tangible benefits to the Organization
- ಉಪಕ್ರವನ್ನು ಜಾರಿಗೊಳಿಸುವಲ್ಲಿ ಆದ ತೊಂದರೆಗಳು:
- Challenges faced during the implementation
- ಉಪಕ್ರಮಗಳ ಯಶಸ್ವಿ ಅಳವಡಿಕೆ/ನಿರಂತರತೆ/ಮುಂದುವರಿಕೆ: Sustainability/ Replicability
ಮುಂದುವರೆದು, ಹೊಸ ಉಪಕ್ರಮಗಳ ಅನುಷ್ಠಾನದಿಂದ ನಿಗಮಕ್ಕೆ ಆರ್ಥಿಕವಾಗಿ ಅನುಕೂಲವಾಗುವುದರೊಂದಿಗೆ, ಸಿಬ್ಬಂದಿಗಳ ಬಳಕೆ ಮತ್ತು ಶ್ರಮವನ್ನು ಕಡಿಮೆಗೊಳಿಸಬಹುದಾಗಿರುತ್ತದೆ ಹಾಗೂ ಸಂಸ್ಥೆಯಲ್ಲಿ ಹೊಸ ಹೊಸ ಬದಲಾವಣೆ ಹಾಗೂ ಅನ್ವೇಷಣೆಗೆ ಉತ್ತೇಜನ ನೀಡಬಹುದಾಗಿರುತ್ತದೆ. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅತ್ಯುತ್ತಮ ಉಪಕ್ರಮಗಳನ್ನು ಅನುಷ್ಠಾನಗೊಳಿಸಿರುವ ಅಧಿಕಾರಿ/ಸಿಬ್ಬಂದಿಗಳ ತಂಡದ ವಿವರದೊಂದಿಗೆ ಮಾಹಿತಿಯನ್ನು ಆದ್ಯತೆಯ ಮೇರೆಗೆ ಕೆ ಎಸ್ ಆರ್ ಟಿ ಸಿ ಕಚೇರಿಗೆ ಕಳುಹಿಸಲು ತಿಳಿಸಿದೆ.