ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ, ಯಂಗ್ ಇಂಡಿಯಾ ಎಲ್ಲವೂ ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೇರಿ ದೇಣಿಗೆ ನೀಡಿದ್ದಾರೆ. ಅದನ್ನು ಕೇಳಲು ಅವರು ಯಾರು? ನೀವು ತೊಂದರೆ ನೀಡುತ್ತೀರಾ ನೀಡಿ, ಜೈಲಿಗೆ ಹಾಕುತ್ತೀರಾ ಹಾಕಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲ್ ಎಸೆದಿದ್ದಾರೆ.
ರಾಜಭವನ ಮುತ್ತಿಗೆ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಆಗುತ್ತಿರುವ ಅನ್ಯಾಯ, ಪ್ರಜಾಪ್ರಭುತ್ವದ ಕಗ್ಗೊಲೆ, ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆದಿದೆ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಮಾನಸಿಕ ಕಿರುಕುಳ ನೀಡಿ, ಬಂಧಿಸಲು ಯತ್ನಿಸುತ್ತಿದ್ದಾರೆ.
ನಮ್ಮ ನಾಯಕರು ದೇಶವನ್ನು ಒಗ್ಗೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ‘ಭಾರತ ಜೋಡೋ’ ಪಾದಯಾತ್ರೆಯನ್ನು ಘೋಷಿಸಿದ ನಂತರ, ಅವರ ಯಾತ್ರೆ ಯಶಸ್ವಿಯಾಗಿ ಅವರ ಖ್ಯಾತಿ ಎಲ್ಲಿ ಹೆಚ್ಚುತ್ತದೆಯೋ, ಎಲ್ಲಿ ನಮ್ಮ ಸರ್ಕಾರ ಅಪಾಯಕ್ಕೆ ಸಿಲುಕುತ್ತದೆಯೋ ಎಂದು ಭಯಭೀತರಾಗಿ ಕೇಂದ್ರ ಸರಕಾರ ಈ ಕೆಲ್ಸಕ್ಕೆ ಕೈ ಹಾಕಿದೆ. ನಮ್ಮ ನಾಯಕರ ತ್ಯಾಗ ಹಾಗೂ ಹೋರಾಟದ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದೆ.
ನೆಹರೂ ಕುಟುಂಬ ದೇಶಕ್ಕಾಗಿ ಅಲಹಬಾದ್ ನಲ್ಲಿ ₹20 ಸಾವಿರ ಕೋಟಿ ರು. ಮೊತ್ತದ ಆಸ್ತಿ ದಾನ ಮಾಡಿದೆ. ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಂಸ್ಥೆ ಅವರ ಸ್ವಂತ ಆಸ್ತಿ ಎಂದು ಘೋಷಿಸಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ಆಸ್ತಿ. ಪಕ್ಷದ ಆಚಾರ, ವಿಚಾರವನ್ನು ಪ್ರಚಾರ ಮಾಡಲು ಈ ಪತ್ರಿಕೆ ನಡೆಸುತ್ತಿದ್ದಾರೆ. ಅವರು ಈ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ ಅಷ್ಟೇ.
ನೆಹರೂ ಅವರು ಜೈಲಿಗೆ ಹೋಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಇಂತಹವರಿಗೆ ಈ ರೀತಿ ಕಿರುಕುಳ ನೀಡುವುದನ್ನು ಜನ ಸಹಿಸುವುದಿಲ್ಲ.
ಪಕ್ಷದ ಕಚೇರಿ ನಮ್ಮ ದೇವಾಲಯ. ಇದಕ್ಕೆ ಪ್ರವೇಶ ನೀಡಲು ಅವಕಾಶ ನೀಡದ ಬಿಜೆಪಿಯ ನೀಚ ಸರ್ಕಾರದ ನಡೆ ಖಂಡಿಸಿ ರಾಜಭವನ ಮುತ್ತಿಗೆ ಹಾಕುತ್ತಿದ್ದೇವೆ. ನಮ್ಮ ಆಕ್ರೋಶ, ಧ್ವನಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಗೂ ಕಾರ್ಯಕರ್ತರ ಪರವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಉಳಿಸಲು ಈ ಹೋರಾಟ. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಾಗಬಾರದು ಎಂದು ಆಗ್ರಹಿಸಿ ಈ ಹೋರಾಟ ಮಾಡುತ್ತಿದ್ದೇವೆ.
ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ಮಾಡಬೇಕು. ಅಲ್ಲಿರುವ ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು.
ರಾಹುಲ್ ಅವರನ್ನು ವಿಚಾರಣೆಗೆ ಕರೆದಿದ್ದಕ್ಕೆ ಕಾಂಗ್ರೆಸ್ ನವರಿಗೆ ಭಯ ಯಾಕೆ ಎಂಬ ಬಿಜೆಪಿ ಪ್ರಶ್ನೆ ಬಗ್ಗೆ ಕೇಳಿದಾಗ, ‘ಅವರು ಸುಳ್ಳು ಕೇಸ್ ಗಳನ್ನು ಹಾಕಿ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ನಿಮ್ಮ ಈ ಬೆದರಿಕೆಗಳಿಗೆ, ಷಡ್ಯಂತ್ರಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ, ಯಂಗ್ ಇಂಡಿಯಾ ಎಲ್ಲವೂ ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೇರಿ ದೇಣಿಗೆ ನೀಡಿದ್ದಾರೆ. ಅದನ್ನು ಕೇಳಲು ಅವರು ಯಾರು? ನೀವು ತೊಂದರೆ ನೀಡುತ್ತೀರಾ ನೀಡಿ, ಜೈಲಿಗೆ ಹಾಕುತ್ತೀರಾ ಹಾಕಿ’ ಎಂದು ಸವಾಲೆಸೆದರು.
ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಹಾಗೂ ಆರೋಗ್ಯ ಸಚಿವರ ಮೇಲೆ ಮೊದಲು ಪ್ರಕರಣ ದಾಖಲಿಸಲಿ. ಕೇವಲ ನಮ್ಮ ವಿರುದ್ಧ ಕೇಸು ದಾಖಲಿಸುತ್ತಿದ್ದಾರೆ. ರಾಜ್ಯ ಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳು ನಿಯಮ ಉಲ್ಲಂಘಿಸಿದ್ದಕ್ಕೆ ಯಾಕೆ ಕೇಸ್ ಹಾಕಿಲ್ಲ? ವಿಧಾನಸೌಧದಲ್ಲಿ ಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘನೆಯಾಗಿದ್ದಕ್ಕೆ ಯಾಕೆ ಪ್ರಕರಣ ದಾಖಲಿಸಿಲ್ಲ? ಬಿಜೆಪಿಯ ಅನೇಕ ಪ್ರಕರಣಗಳಲ್ಲಿ ಕೇಸ್ ದಾಖಲಿಸಿಲ್ಲ. ನಮಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವ ಹಕ್ಕು ಇದೆ. ಈ ದೇಶಕ್ಕೆ ಸ್ವಾತಂತ್ರ ಬಂದಿದ್ದೇ ಹೋರಾಟದ ಮೂಲಕ’ ಎಂದರು.
‘ಬೆಳಗಾವಿ ಶಿಕ್ಷಕರು, ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರದ ಪದವೀದರರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದರು. ಇಂದು ಶಿಕ್ಷಕರು ಹಾಗೂ ಪಧವಿದರರು 4 ಕ್ಷೇತ್ರಗಳ ಪೈಕಿ 2 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಎಲ್ಲ ಪ್ರಜ್ಞಾವಂತ ಮತದಾರರು ರಾಜ್ಯಕ್ಕೆ ಮುಂದಿನ ಭವಿಷ್ಯ ಕಾಂಗ್ರೆಸ್ ಎಂದು ತೋರಿಸಿದ್ದಾರೆ. ಮತ ಕೊಟ್ಟ ಎಲ್ಲರಿಗೂ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.




