ಹುಬ್ಬಳ್ಳಿ: ನಗರದಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರೂ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ
ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರು ಬಂಧಿಸಿದರು.
ಹುಬ್ಬಳ್ಳಿಯಿಂದ ಕಾರಿನಲ್ಲಿ ಬಾಗಲಕೋಟೆ ಕಡೆಗೆ ಹೊರಟ ಆರೋಪಿಗಳು ರಾಮದುರ್ಗ ಪಟ್ಟಣ ಸಮೀಪ ಬಂದಾಗ ಬಂಧಿಸಲಾಗಿದೆ. ಕೊಲೆಯ ಬಳಿಕ ಆರೋಪಿಗಳ ಮೊಬೈಲ್ ಲೊಕೇಷನ್ ಮೂಲಕ ಹುಬ್ಬಳ್ಳಿ ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದರು. ಆರೋಪಿಗಳು ರಾಮದುರ್ಗ ಮಾರ್ಗವಾಗಿ ಸಂಚರಿಸುತ್ತಿರುವುದನ್ನು ಖಚಿತ ಮಾಡಿಕೊಂಡು, ಇಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಆರೋಪಿಗಳು ಕಾರಿನಲ್ಲಿ ಬರುವುದನ್ನು ಖಾತ್ರಿ ಮಾಡಿಕೊಂಡ ರಾಮದುರ್ಗ ಪೊಲೀಸರು ರಾಜ್ಯ ಹೆದ್ದಾರಿ ಮೇಲೆ ಜೆಸಿಬಿ ಅಡ್ಡಹಾಕಿ ಕಾರ್ ನಿಲ್ಲಿಸಿದರು. ಪೊಲೀಸ ಇಬ್ಬರು ಅಧಿಕಾರಿಗಳು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಕಾರಿಗೆ ಎದುರುಗೊಂಡರು. ಆರೋಪಿಗಳು ಹಿಂದಕ್ಕೆ ಕಾರ್ ತಿರುವಿ ಪರಾರಿಯಾಗದಂತೆ ಹಿಂಬದಿಯಿಂದಲೂ ವಾಹನ ನಿಲ್ಲಿಸಿ ತಡೆಯಲಾಯಿತು.
ಕಾರ್ ಸುತ್ತುವರಿದ ಪೊಲೀಸರು ಆರೋಪಿಗಳನ್ನು ಹಿಂಬದಿಯಿಂದ ಕೈಕಟ್ಟಿ, ಕಾಲರ್ ಹಿಡಿದು ಎಳೆದೊಯ್ದು ಪೊಲೀಸ ವಾಹನ ಹತ್ತಿಸಿದರು. ಅಲ್ಲಿಂದ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು.
ರಾಮದರ್ಗ ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್‍ಐ ಶಿವಾನಂದ ಕಾರಜೋಳ ಈ ಕಾರ್ಯಾಚರಣೆ ನಡೆಸಿದರು. ಒಟ್ಟು 22 ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿತ್ತು.