ಬೆಂಗಳೂರು: ವಿರೋಧಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ನೇಮಕಾತಿ ಹಗರಣಗಳು ನಡೆದಿವೆ. ಅಂತಹ ಸಂದರ್ಭದಲ್ಲಿ ಅವರು ರಾಜಿನಾಮೆಯನ್ನು ನೀಡಿದ್ದರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಅವರು ಇಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಪಿಎಸ್ ಐ ನೇಮಕಾತಿ ಪರೀಕ್ಷಾ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಆಗ ಅವರು ರಾಜೀನಾಮೆ ನೀಡಿದ್ದರೆ? ಈ ಮಾನದಂಡದಲ್ಲಿ ಸಿದ್ಧರಾಮಯ್ಯನವರು ಹಲವು ಬಾರಿ ರಾಜಿನಾಮೆ ನೀಡಬೇಕಿತ್ತು ಎಂದು ಸಿಎಂ ಹೇಳಿದರು.
ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪೊಲೀಸ್ ನೇಮಕಾತಿ ಪ್ರಕರಣದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ಪ್ರಶ್ನೆಪತ್ರಿಕೆ ತಯಾರಿಸಿದ್ದ ಡಿಐಜಿ ಅವರ ಮನೆಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಅದು ವಿಚಾರಣೆಯಾಗಿ ಆರೋಪಿಯೆಂದು ಗುರುತಿಸಿದರು. ಅಧಿಕಾರಿಯನ್ನು ಅಮಾನತ್ತಾಗಲಿ , ವಜಾ ಆಗಲಿ ಮಾಡಲಿಲ್ಲ. ಸಿದ್ಧರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ನೇಮಕಾತಿ ಹಗರಣಗಳ ಬಗ್ಗೆ ಮಾಹಿತಿ ಮುಂದೆ ನೀಡುತ್ತೇನೆ ಎಂದು ತಿಳಿಸಿದರು.




