ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಶೂ ಸಾಕ್ಸ್, ಬೈಸಿಕಲ್ ವಿತರಣೆಗೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು :  ರಾಜ್ಯದಲ್ಲಿ ಪ್ರವಾಹವಾಗುವ ಪ್ರದೇಶಗಳನ್ನು ಪರಿಶೀಲಿಸಿ, ತಾತ್ಕಾಲಿಕ ಅಥವಾ ಶಾಶ್ವತ ಸ್ಥಳಾಂತರಿಸುವಿಕೆಯ ಬಗ್ಗೆ ಸರ್ವೇ ಮಾಡಲು ಸೂಚನೆ ನೀಡಲಾಗಿದೆ ಎಂದರು. ಅಲ್ಲದೇ ಇದೇ ವೇಳೆ ಮಕ್ಕಳಿಗೆ ಶೂ ಸಾಕ್ಸ್, ಬೈಸಿಕಲ್ ವಿತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮೈಸೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ಬಾರಿ ಮಳೆ ಬಂದಾಗ ಕೆಲವೊಂದು ಗ್ರಾಮಗಳು ಮುಳುಗಡೆ ಆಗುತ್ತಿವೆ. ಇದಕ್ಕೆ ಶಾಶ್ವತವಾದ ಪರಿಹಾರವನ್ನು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, 2009ರಲ್ಲಿ ದೊಡ್ಡ ಪ್ರಮಾಣದ ಮಳೆಯಾಗಿತ್ತು. ಸುಮಾರು 60 ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ ಮನೆಗಳನ್ನು ನಿರ್ಮಿಸಿಕೊಡಲಾಯಿತು. ಆದರೆ ಪ್ರವಾಹ ಇಳಿದ ಸಂದರ್ಭದಲ್ಲಿ ಜನರು ತಮ್ಮ ಹಳೆಯ ಸ್ಥಳಗಳಿಗೆ ಹೋಗುತ್ತಿದ್ದರು. ಪ್ರವಾಹದ ಸಂದರ್ಭದಲ್ಲಿ ನದಿದಂಡೆ, ತಗ್ಗುಪ್ರದೇಶದಲ್ಲಿರುವ ಜನರಿಗೆ ಅನುಕೂಲವಾಗುವಂತೆ ಎತ್ತರದ ಪ್ರದೇಶದಲ್ಲಿ ವ್ಯವಸ್ಥಿತವಾದ ಪುನರ್ವಸತಿ ಕೇಂದ್ರವನ್ನು ನಿರ್ಮಿಸಿ, ಕೂಡಲೇ ಜನರನ್ನು ಸ್ಥಳಾಂತರಿಸಿದರೆ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ತಿಳಿಸಿದರು.

ಹಾನಿಯಾದ ಮನೆಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚನೆ

ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಳಹಂತದ ಮನೆಗಳಿರುವವರನ್ನು ಸ್ಥಳಾಂತರಿಸಲು ತಿಳಿಸಲಾಗಿದೆ. ಪರಿಹಾರ ಕಾರ್ಯಗಳನ್ನು ಕೈಗೊಂಡು, ರಸ್ತೆ ಸಂಪರ್ಕ ಸಮರ್ಪಕವಾಗಿರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಕಂದಾಯ ಸಚಿವರು ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಕ್ಷಣದ ಪರಿಹಾರ ಕಾರ್ಯಗಳಿಗಾಗಿ ಪೂರಕ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದ್ದು, ಕಡಲ ಕೊರೆತವಾಗುತ್ತಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಖುದ್ದು ಪರಿಶೀಲನೆ ನಡೆಸಿ, ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು, ಮನೆ ಹಾನಿಯಾಗಿರುವವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಮತ್ತು ಮುಂದಿನ ದಿನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ

ಕಡಲಕೊರೆತವನ್ನು ಶಾಶ್ವತವಾಗಿ ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಂದಿದ್ದು, ಪ್ರಾಯೋಗಿಕವಾಗಿ ಅವುಗಳನ್ನು ಬಳಸಲಾಗುವುದು. ರಕ್ಷಣಾ ಕಾರ್ಯವನ್ನು ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಮೈಸೂರಿನ ಎನ್ ಡಿಆರ್ ಎಫ್ ತಂಡವನ್ನು ಕೊಡಗು ಜಿಲ್ಲೆಗೂ, ಮಂಗಳೂರಿನ ಎನ್ ಡಿ ಆರ್ ಎಫ್ ನ್ನು ಮಂಗಳೂರು ಜಿಲ್ಲೆಗೆ , ಮಂಗಳೂರು ಜಿಲ್ಲೆಯ ಎಸ್ ಡಿ ಆರ್ ಎಫ್ ತಂಡವನ್ನು ಉಡುಪಿ ಹಾಗೂ ಕಾರವಾರ ಜಿಲ್ಲೆಗೂ ನಿಯೋಜಿಸಲಾಗಿದೆ. ಪರಿಹಾರ ಕಾರ್ಯಗಳಿಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ 10 ಕೋಟಿ ರೂ. ಅನುದಾನದ ಲಭ್ಯತೆ ಇದೆ. 4 ಜಿಲ್ಲೆಗಳಲ್ಲಿ ಕಾರವಾರ ಜಿಲ್ಲೆಯಲ್ಲಿ 45 ಕೋಟಿ ರೂ. ಇದ್ದು, ಇನ್ನುಳಿದ ಜಿಲ್ಲೆಗಳಲ್ಲಿ 10 ರಿಂದ 15 ಕೋಟಿ ರೂ. ಲಭ್ಯವಿದೆ ಎಂದರು.

ರಾಜಾಕಾಲುವೆ ನಿರ್ಮಾಣ

ಬೆಂಗಳೂರು ನಗರದಲ್ಲಿ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬುವ ಬಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ವಿವರಿಸಿ, ಬೆಂಗಳೂರು ನಗರದಲ್ಲಿ ತಗ್ಗುಪ್ರದೇಶ ಹಾಗೂ ಕೆರೆ ಅಂಗಳದಲ್ಲಿ ಮನೆ ನಿರ್ಮಿಸಿರುವ ಸಮಸ್ಯೆಗಳಿವೆ. ಕೆಲವು ಕಡೆ ಮುಖ್ಯ ಕಾಲುವೆ ಸಮೀಪ ಮನೆಗಳಿವೆ. ರಾಜಕಾಲುವೆಯನ್ನು ಸಂಪೂರ್ಣವಾಗಿ ನಿರ್ಮಿಸಲು 1600 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರಿಂದ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಮಕ್ಕಳಿಗೆ ಶೂ ಸಾಕ್ಸ್, ಬೈಸಿಕಲ್ ವಿತರಣೆಗೆ ಕ್ರಮ

ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಸಾಕ್ಸ್, ಬೈಸಿಕಲ್ ವಿತರಣೆ ಆಗಲಿದೆಯೆ ಎಂಬುದಕ್ಕೆ ಉತ್ತರಿಸಿ, ಮಕ್ಕಳಿಗೆ ಶೂ ಸಾಕ್ಸ್, ಬೈಸಿಕಲ್ ವಿತರಣೆ ಆಗಲಿದ್ದು, ಶಿಕ್ಷಣ ಸಚಿವರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

About The Author