Tuesday, November 18, 2025

Latest Posts

ನ.11ರಿಂದ ಒಂದು ತಿಂಗಳ ಕಾಲ ಪ್ರತಿಷ್ಠಿತ ‘ಬೆಂಗಳೂರು ಡಿಸೈನ್ ಫೆಸ್ಟಿವಲ್

- Advertisement -

ಬೆಂಗಳೂರು: ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ ಯೋಜನೆಯ ಭಾಗವಾಗಿ ಈ ವರ್ಷದ ನ.11ರಿಂದ ಡಿ. 12ರವರೆಗೆ ಪ್ರತಿಷ್ಠಿತ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ ನಡೆಯಲಿದೆ. ಈ ಉತ್ಸವದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇದ್ದರು.

ನಂತರ ಸಚಿವ ಅಶ್ವತ್ಥನಾರಾಯಣ ಮಾತನಾಡಿ ಈ ಉತ್ಸವದಲ್ಲಿ ದೇಶ- ವಿದೇಶಗಳ ಖ್ಯಾತ ವಿನ್ಯಾಸಕಾರರು ಮತ್ತು ಶಿಲ್ಪಿಗಳು ಭಾಗವಹಿಸಲಿದ್ದಾರೆ. ಆಧುನಿಕ ಯುಗದಲ್ಲಿ ಆಕರ್ಷಕ ಮತ್ತು ಹೊಸತನದಿಂದ ಕೂಡಿರುವ ವಿನ್ಯಾಸವೇ ಸರ್ವಸ್ವವೂ ಆಗಿದೆ ಎಂದರು.

ಈ ಉತ್ಸವದ ಮೂಲಕ ಬೆಂಗಳೂರು ನಗರವು ವಿನ್ಯಾಸ ಕ್ಷೇತ್ರದ ಕಲಿಕೆ, ಅನ್ವಯಿಕತೆ, ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ದೇಶದ ಅಗ್ರಗಣ್ಯ ನಗರವಾಗಲಿದೆ. ಜತೆಗೆ, ಈ ಕ್ಷೇತ್ರದಲ್ಲಿ ಯುವಜನರಿಗೆ ಹೇರಳ ಉದ್ಯೋಗ ಅವಕಾಶ ದೊರೆಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

‘ಕಲೆ ಮತ್ತು ವಿನ್ಯಾಸ ಆಧರಿತ ಆರ್ಥಿಕತೆಯು ಭವಿಷ್ಯದ ದಾರಿಯಾಗಿದೆ. ಬೆಂಗಳೂರು ನಗರವು ಇದರ ರಾಜಧಾನಿಯಾಗಿ ಹೊರಹೊಮ್ಮಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದರು.

ಬೆಂಗಳೂರು ಯುವಜನರಿಗೆ ಡಿಸೈನ್ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳು ಕಾದಿವೆ. ಇದಕ್ಕೆ ಬೇಕಾದ ಕೌಶಲಗಳನ್ನು ಕಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕೆಲ ತಿಂಗಳ ಹಿಂದೆ ದುಬೈ ವಾಣಿಜ್ಯ ಮೇಳಕ್ಕೆ ತೆರಳಿದ್ದಾಗ ಈ ಯೋಜನೆ ಮತ್ತು ಬೆಂಗಳೂರು ಡಿಸೈನ್ ಫೆಸ್ಟಿವಲ್ ಬಗ್ಗೆ ಉಪಕ್ರಮ ಆರಂಭಿಸಲಾಗಿತ್ತು ಎಂದು ಅವರು ನುಡಿದರು.

ಬೆಂಗಳೂರು ಡಿಸೈನ್ ಫೆಸ್ಟಿವಲ್ ಗೆ ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ವರ್ಲ್ಡ್ ಡಿಸೈನ್ ಕೌನ್ಸಿಲ್, ಜೈನ್ ವಿವಿ ಮುಂತಾದ ಸಂಸ್ಥೆಗಳು ಸಹಭಾಗಿತ್ವ ನೀಡುತ್ತಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಎಸ್ಡಿಸಿ ಮುಖ್ಯಸ್ಥ ಟಾಮ್ ಜೋಸೆಫ್, ಡಿಜಿಟಲ್ ವಿಭಾಗದ ನಿರ್ದೇಶಕ ಅರುಣ್ ಬಾಲಚಂದ್ರನ್ ಉಪಸ್ಥಿತರಿದ್ದರು.

- Advertisement -

Latest Posts

Don't Miss