ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ZEE5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರುಗೊಳ್ಳುವ ರಿಷಿ ಸಿನಿಮಾ ಆಯ್ಕೆ ವಿಚಾರದಲ್ಲೂ ಸಖತ್ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’. ಸದ್ಯ ಈ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ. ರಿಷಿ ಚಿತ್ರಕ್ಕೆ ಕ್ರೇಜಿ ಸ್ಟಾರ್ ಸಾಥ್ ಕೂಡ ಸಿಕ್ಕಿದ್ದು, ಚಿತ್ರದ ಕಚಗುಳಿ ಇಡೋ ಟ್ರೇಲರ್ ರನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಪ್ರಯೋಗಾತ್ಮಕ ಸಬ್ಜೆಕ್ಟ್ ಒಳಗೊಂlಡಿದೆ. ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎರಡು ಗಂಭೀರ ವಿಚಾರಗಳನ್ನಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಥೆ ಸೀರಿಯಸ್ ಆಗಿ ಸಾಗುತ್ತಿದ್ರು ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ನಟ ರಿಷಿ. ಒಟ್ಟಿನಲ್ಲಿ ಯುವಜನತೆಯ ಸಮಸ್ಯೆಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಲಿದೆ ಎನ್ನುವುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಧನ್ಯ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವ ಎಸ್ ಭಾರಧ್ವಜ್, ಭಾವನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾಧ್ ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಇಸ್ಲಾಹುದ್ದೀನ್ ಎನ್ ಎಸ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮ್ರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾಧ್ ಪಿ, ದುಲೀಪ್ ಕುಮಾರ್ ಎಂ.ಎಸ್ ಕ್ಯಾಮೆರಾ ವರ್ಕ್, ಪ್ರಸನ್ನ ಸಿವರಾಮನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.