ಈ 10 ಗುಣಗಳು ನಿಮ್ಮಲ್ಲಿದ್ದಲ್ಲಿ, ಜನ ನಿಮಗೆಂದೂ ಗೌರವ ನೀಡುವುದಿಲ್ಲ..- ಭಾಗ 3

ಈ ಮೊದಲು ನಾವು ನಿಮಗೆ ಯಾವ 10 ಗುಣಗಳಿದ್ರೆ ನಿಮಗೆ ಗೌರವ ಸಿಗುವುದಿಲ್ಲ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 3 ಗುಣಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 4 ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಏಳನೆಯ ಗುಣ. ನಿಮ್ಮ ತಪ್ಪು ಇದ್ದರೂ, ತಪ್ಪೊಪ್ಪಿಕೊಳ್ಳದೇ ವಾದ ಮಾಡುವುದು. ಮಾತಿನಲ್ಲಿ ಸಾಫ್ಟ್‌ನೆಸ್ ಇದ್ದರೆ, ಹೇಗೆ ಎಲ್ಲರೂ ನಿಮ್ಮನ್ನ ಮೆಚ್ಚುತ್ತಾರೋ, ಅದೇ ರೀತಿ ಮಾತಿನಲ್ಲಿ ಕಹಿ ಇದ್ದರೆ, ನಿಮ್ಮಿಂದ ಎಲ್ಲರೂ ದೂರವಾಗ್ತಾರೆ. ಇನ್ನು ನೀವು ತಪ್ಪು ಮಾಡಿದ್ದಲ್ಲಿ, ಹೌದು ನಾನು ತಪ್ಪು ಮಾಡಿದೆ, ಕ್ಷಮಿಸಿ ಎಂದು ಕೇಳಿ ಸುಮ್ಮನಾಗುವುದು ಒಳಿತು. ಅದನ್ನು ಬಿಟ್ಟು, ತಪ್ಪು ಮಾಡಿದ್ದರೂ, ಇಲ್ಲ ನಾನೇನು ತಪ್ಪು ಮಾಡಿಲ್ಲವೆಂದು ಮೊಂಡು ವಾದ ಮಾಡಿದ್ರೆ, ನಿಮ್ಮ ಮೇಲಿನ ಗೌರವ ಕಡಿಮೆಯಾಗುವುದಲ್ಲದೇ, ಮತ್ತೊಮ್ಮೆ ಅವರು ನಿಮ್ಮ ಬಳಿ ಮಾತನಾಡುವ ಮನಸ್ಸೂ ಮಾಡುವುದಿಲ್ಲ.

ಎಂಟನೆಯ ಗುಣ. ಮಾತಿನ ಮದ್ಯೆ ಬಾಯಿ ಹಾಕುವುದು. ಯಾರಾದರೂ ಮಾತನಾಡುವಾಗ, ಅಥವಾ ಮೀಟಿಂಗ್ ಸಂದರ್ಭದಲ್ಲಿ ಒಂದೆರಡು ಬಾರಿ ಮಧ್ಯೆ ಮಾತನಾಡುವ ಅಭ್ಯಾಸವಿದ್ದರೆ ಪರವಾಗಿಲ್ಲ. ಆದ್ರೆ ನೀವು ಪದೇ ಪದೇ ಮಧ್ಯ ಮಧ್ಯ ಮಾತನಾಡುತ್ತಲೇ ಇದ್ದರೆ, ನಿಮ್ಮ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ಮೀಟಿಂಗ್ ಸಮಯದಲ್ಲಿ ಅಥವಾ ಯಾರೊಂದಿಗಾದರೂ ಮಾತನಾಡುವ ಸಂದರ್ಭದಲ್ಲಿ ಪದೇ ಪದೇ ಮಾತನಾಡುವ ಬದಲು, ಅವರ ಮಾತನ್ನು ಕೇಳಿಸಿಕೊಂಡು ಕೊನೆಗೆ ನಿಮ್ಮ ಅಭಿಪ್ರಾಯವನ್ನು ಹೇಳಿ. ಆವಾಗ ನಿಮ್ಮ ಬೆಲೆ ಮತ್ತು ಗೌರವ ಹೆಚ್ಚುತ್ತದೆ.

ಒಂಭತ್ತನೆಯ ಗುಣ. ಸಂಬಂಧದಲ್ಲೂ ಬರೀ ನಿಮ್ಮ ಲಾಭದ ಬಗ್ಗೆಯಷ್ಟೇ ಯೋಚಿಸೋದು. ಹೊರಗಿನವರ ವಿಷಯದಲ್ಲಿ ನಾವು ನಮ್ಮ ಲಾಭದ ಬಗ್ಗೆ ಯೋಚಿಸೋದು ತಪ್ಪಲ್ಲ. ಆದ್ರೆ ಆ ಲಾಭ ನಿಯತ್ತಿನಿಂದ ತೆಗೆದುಕೊಂಡಿದ್ದಾಗಿರಬೇಕು. ಅಲ್ಲಿ ಸ್ವಾರ್ಥವಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ಆದ್ರೆ ಸಂಬಂಧದಲ್ಲೂ ನೀವು ನಿಮ್ಮ ಸ್ವಾರ್ಥವನ್ನೇ ಕಂಡರೆ, ನಿಮ್ಮ ಸಂಭಂಧ ಗಟ್ಟಿಯಾಗಿರುವುದಿಲ್ಲ. ನಿಮ್ಮ ಸ್ವಾರ್ಥ ಸಂಬಂಧದಿಂದ ನಿಮ್ಮ ಗೌರವವನ್ನೇ ನೀವು ಕಳೆದುಕೊಂಡುಬಿಡುತ್ತೀರಿ.

ಹತ್ತನೆಯ ಗುಣ. ಬೇರೆಯವರ ವಿಷಯದಲ್ಲಿ ಮೂಗುತೂರಿಸುವುದು. ಪದೇ ಪದೇ ಬೇರೆಯವರ ವಿಷಯಕ್ಕೆ ಸಂಬಂಧಿಸಿದಂತೆ, ಅವರನ್ನು ಕೆಣಕಿ ಕೆಣಕಿ, ಆ ವಿಷಯ ಹೇಳಲು ಫೋರ್ಸ್ ಮಾಡಿದರೆ, ಅವರಿಗೆ ನಿಮ್ಮ ಮೇಲಿರುವ ಗೌರವ ಕಳೆದು ಹೋಗುತ್ತದೆ. ಆಗ ಅವರು ನಿಮಗೆ ನೇರವಾಗಿ, ನಿಮ್ಮ ಕೆಲಸವೆಷ್ಟು ಅಷ್ಟು ನೋಡಿಕೊಳ್ಳಿ ಎಂದು ಹೇಳುತ್ತಾರೆ. ಹಾಗಾಗಿ ಇಂಥ ತಪ್ಪನ್ನ ಜೀವನದಲ್ಲೆಂದೂ ಮಾಡಲೇಬೇಡಿ.

About The Author