ಬೆಂಗಳೂರು: ಮತೀಯ ಶಕ್ತಿಗಳು ರಾಜ್ಯದಲ್ಲಿ ತಲೆ ಎತ್ತಲು ಅವಕಾಶ ಮಾಡಿಕೊಡಬಾರದು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕೂಡಲೇ ಅವರ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಯಾವ ಸಂಘಟನೆಗಳಿವೆ ಎಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ. ಹಂತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕರಾವಳಿ ಪ್ರದೇಶದಲ್ಲಿಯೇ ಈ ರೀತಿಯ ಮತೀಯ ಶಕ್ತಿಗಳು ತಲೆ ಎತ್ತುತ್ತಿವೆ. ರಾಜ್ಯ ಸರ್ಕಾರ ಈಗಾಗಲೇ ಸೂಕ್ತ ಕಾನೂನು ಸುವ್ಯವಸ್ಥೆಯ ಕ್ರಮ ಕೈಗೊಂಡಿದೆ. ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನ ರಾಜ್ಯ ಸರ್ಕಾರ ಕೈಗೊಳ್ಳುವ ವಿಶ್ವಾಸವಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದರು.




