ಬೆಂಗಳೂರು: ರಾಜ್ಯ ಕ್ಷಿಪ್ರ ರಾಜಕೀಯ ಬೆಳವಣಿಗೆ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಸುಪ್ರೀಂ ಕೋರ್ಟ್ ಸ್ಪೀಕರ್ ಸೂಚನೆ ಬೆನ್ನಲ್ಲೇ ಅತೃಪ್ತ ಶಾಸಕರು ವಿಧಾನಸೌಧಕ್ಕೆ ಬಂದು ಮತ್ತೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹಾಗೂ ಕುಮಾರಸ್ವಾಮಿ ಆಪ್ತ ಸಚಿವ ಸಾ.ರಾ ಮಹೇಶ್ ಭೇಟಿ ಭಾರೀ ಬೆಳವಣೆಗೆಗೆ ಕಾರಣವಾಗಿದೆ.
30 ನಿಮಿಷ ಮೂವರು ನಾಯಕರ ಮಾತುಕತೆ..!
ಇನ್ನು 30 ನಿಮಿಷಗಳ ಕಾಲ ಕೆ.ಕೆ ಗೆಸ್ಟ್ ಹೌಸ್ ನಲ್ಲಿ ಈಶ್ವರಪ್ಪ ಸಮ್ಮುಖದಲ್ಲಿ ಸಾ.ರಾ ಮಹೇಶ್ ಮುರಳೀಧರ್ ರಾವ್ ಜೊತೆ ಮಾತುಕತೆ ನಡೆಸಿದ್ದಾರೆ. ಮಾಧ್ಯಮದವರು ಸ್ಥಳಕ್ಕೆ ಬಂದ ತಕ್ಷಣ ಸಚಿವ ಸಾ.ರಾ ಮಹೇಶ್ ಅಲ್ಲಿಂದ ಕಾಲ್ಕಿತ್ತರು. ನಾವು ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಅಂತ ಸಾ.ರಾ ಮಹೇಶ್ ತಡವರಿಸಿದ್ರು..ಈ ನಡುವೆ ಈಶ್ವರಪ್ಪ, ಮುರಳೀಧರ್ ರಾವ್ ಅವರಸವಾಗಿ ಅಲ್ಲಿಂದ ಮಾಧ್ಯಮದವರ ಜೊತೆ ಮಾತನಾಡದೆ ಹೊರಟು ಹೋದ್ರು.
ಜೆಡಿಎಸ್, ಬಿಜೆಪಿ ನಾಯಕರ ನಡುವೆ ರಹಸ್ಯ ಮಾತು..?
ಮೂಲಗಳ ಪ್ರಕಾರ ಸರ್ಕಾರ ಬೀಳಲು ಕಾರಣವಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಸಿಗಬಾರದು. ನಾವೇ ಬಿಜೆಪಿಗೆ ಬಾಹ್ಯ ಬೆಂಬಲ ಕೊಡ್ತೀವಿ ಅಂತ ಜೆಡಿಎಸ್ ನಾಯಕರು ಬಿಜೆಪಿ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಮೈತ್ರಿ ಸರ್ಕಾರದ ವಿರುದ್ಧ ಯಾವುದೇ ತನಿಖೆ ಮಾಡಬಾರದು, ಹಾಗೆಯೇ ಯಾವುದೇ ವರ್ಗಾವಣೆಯನ್ನ ಕ್ಯಾನ್ಸಲ್ ಮಾಡಬಾರದು, ಜೊತೆಗೆ ವಿಧಾನಸಭೆ ಅಧಿವೇಶನದಲ್ಲಿ ಫಿನಾನ್ಸ್ ಬಿಲ್ ಗೆ ತಡೆ ಒಡ್ಡದಿದ್ರೆ ಸಾಕು. ಸೋಮವಾರ ನೀವೇ ಸರ್ಕಾರ ರಚಿಸಿ ನಾವೇ ಬಿಜೆಪಿಗೆ ಬೆಂಬಲ ಕೊಡ್ತೀವಿ ಅಂತ ಜೆಡಿಎಸ್ ನಾಯಕರು ಮಾತು ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಬಿಜೆಪಿ ಜೊತೆ ಜೆಡಿಎಸ್ ರಹಸ್ಯ ಮಾತು. ಕಾಂಗ್ರೆಸ್ ಸಿಟ್ಟು..!
ಇನ್ನು ಸಾ.ರಾ ಮಹೇಶ್ ಮುರಳೀಧರ್ ರಾವ್ ಜೊತೆಗಿನ ಗುಪ್ತ್ ಗುಪ್ತ್ ಮಾತುಕತೆ ಕಾಂಗ್ರೆಸ್ ಪಕ್ಷವನ್ನ ರೊಚ್ಚಿಗೇಳುವಂತೆ ಮಾಡಿದೆ. ನಿಮ್ಮ ಜೊತೆ ನಾವು ಸರ್ಕಾರ ಮಾಡಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗ್ತಿದೆ. ಆದ್ರೆ ನಿಮ್ಮ ಈ ಅನುಮಾನದ ನಡೆ ನಮಗೆ ದಿಗ್ಭ್ರಮೆ ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.