ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಮೀಸಲಾತಿ ಕಾನೂನು ಗೈಡ್ ಲೈನ್ಸ್ ಪ್ರಕಾರ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಬಿಜೆಪಿ ಶಾಸಕರು, ಸಂಸದರು, ಮುಖಂಡರು ಕೇಶವಕೃಪದಲ್ಲಿ ಕೂತು ಮನಬಂದಂತೆ ನೀಡಲಾಗಿರುವ ಮೀಸಲಾತಿಯನ್ನು ಕೂಡಲೇ ಹಿಂಪಡೆಯದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಪ್ರಕಟಿಸಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ವಿಕಾಸ ಸೌಧದ ನಗರಾಭಿವೃದ್ಧಿ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಿ, ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಶಾಸಕರು, ಸಂಸದರು, ಮುಖಂಡರು, ಕೇಶವಕೃಪದಲ್ಲಿ ಕೂತು ನೀಡಲಾಗಿರುವ ಮೀಸಲಾತಿಯು ಕಾನೂನು ಗೈಡ್ ಲೈನ್ಸ್ ಪ್ರಕಾರ ಇಲ್ಲ. ಮನಸ್ಸಿಗೆ ಬಂದಂತೆ ಡಿ ಲಿಮಿಟೇಷನ್ ಹಾಕಲಾಗಿದ್ದು, ಅಗತ್ಯವಿಲ್ಲದ ಕಡೆ ಬಿಸಿಬಿ ಹಾಕಿದ್ದಾರೆ. ಬೇಕಾಬಿಟ್ಟಿ ರಿಸರ್ವೇಷನ್ ಮಾಡಿದ್ದಾರೆ. ಮಹಿಳಾ ಮೀಸಲಾತಿ ನೀಡೋದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಕಾಂಗ್ರೆಸ್ ನಾಯಕರಿರೋ ಕಡೆ ಮಾತ್ರ, ಬರೀ ಮಹಿಳಾ ಮೀಸಲಾತಿ ಹಾಕಲಾಗಿದೆ. ಎಲ್ಲಿ ಹಿಂದುಳಿದವರಿಲ್ಲವೋ, ಅಲ್ಲಿ ಮೀಸಲಾತಿ ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, ಅಕ್ರಮ, ಅನ್ಯಾಯ, ಅಧಿಕಾರ ವಿರೋಧಿತನದಿಂದ ಕೂಡಿದ ಮೀಸಲಾತಿಯನ್ನು
ಪ್ರಶ್ನಿಸಿ ನಾವು ಕೊಟ್ಟ ತರಕಾರರನ್ನು ಮೂಟೆ ಕಟ್ಟಿ ಮೂಲೆಗೆ ಎಸೆದಿದ್ದಾರೆ ಎಂದು ಕಿಡಿ ಕಾರಿದರು.
ಪ್ರಸ್ತುತ ಪ್ರಕಟಿಸಿರುವ ಮೀಸಲಾತಿ ವಾಪಸ್ ಪಡೆದು, ಕಾನೂನು ಗೈಡ್ ಲೈನ್ಸ್ ಪ್ರಕಾರ ಮೀಸಲಾತಿ ಪ್ರಕಟಿಸಿ. ಸುಸೂತ್ರವಾಗಿ ಚುನಾವಣೆ ನಡೆಯಬೇಕೆಂಬುದಷ್ಟೇ ನಮ್ಮೆಲ್ಲರ ಉದ್ದೇಶ. ದುರುದ್ದೇಶ ಪ್ರೇರಿತ ಮೀಸಲಾತಿಯನ್ನು ತಕ್ಷಣ ಹಿಂಪಡೆಯದಿದ್ದರೆ, ನಾವು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಅಷ್ಟೇ ಅಲ್ಲ, ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ಶಾಸಕರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.




