manglore:
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್[praveen nettar] ಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂಬುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿಯಾಬ್, ರಿಯಾಜ್ ಮತ್ತು ಬಶೀರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಕೇರಳದಲ್ಲಿ ಬಂಧಿಸಿರುವ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಗೌಪ್ಯ ಸ್ಥಳದಲ್ಲಿರಿಸಿ ಮೂವರು ಆರೋಪಿಗಳ ತೀವ್ರ ವಿಚಾರಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26 ರಂದು ಪ್ರವೀಣ್ ನೆಟ್ಟಾರು ಹತ್ಯೆಗೈದಿದ್ದ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರು ಎಂಬುವುದಾಗಿ ತಿಳಿದು ಬಂದಿತ್ತು. ಈ ಕುರಿತು ಮಂಗಳೂರಿನಲ್ಲಿ ಮಧ್ಯಾಹ್ನ 12 ಗಂಟೆಗೆ ಪೊಲೀಸರಿಂದ ಸುದ್ದಿಗೋಷ್ಠಿ ನಡೆಯಲಿದ್ದು, ಪ್ರವೀಣ್ ಹತ್ಯೆಗೈದಿದ್ದ ಪ್ರಮುಖ ಆರೋಪಿಗಳ ಬಂಧನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬೆಳ್ಳಾರೆ ಠಾಣೆ ಪೊಲೀಸರು ಆಗಸ್ಟ 8 ರಂದು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದರು. ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್.ಸಿ.ಎ ಬಂಧಿತ ಆರೋಪಿಯಾಗಿದ್ದಾನೆ. ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಈವರೆಗೆ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆ ಪೊಲೀಸರು ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಜುಲೈ 28 ರಂದು ಬೆಳ್ಳಾರೆಯ ಶಫೀಕ್,ಸವಣೂರಿನ ಜಾಕೀರ್ನನ್ನು ಬಂಧಿಸಿಲಾಗಿತ್ತು. ಅಗಸ್ಟ್ 01 ರಂದು ಪಲ್ಲಿ ಮಜಲು ನಿವಾಸಿಗಳಾದ ಸದ್ದಾಂ,ಹ್ಯಾರಿಸ್ನನ್ನು ಬಂಧಿಸಲಾಗಿದೆ. ಅಗಸ್ಟ್ 7 ರಂದು ಸುಳ್ಯದ ನಾವೂರು ನಿವಾಸಿ ಅಬೀದ್ ಮತ್ತು ಬೆಳ್ಳಾರೆ ನಿವಾಸಿ ನೌಫಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಏಳನೇ ಆರೋಪಿಯಾಗಿ ಅಬ್ದುಲ್ ಕಬೀರ್ ಸಿ.ಎ ನನ್ನು ಬಂಧಿಸಲಾಗಿದೆ. ತನಿಖೆ ನಿರಂತರ ನಡೆಯುತ್ತಿದ್ದು ಹತ್ಯೆಯಲ್ಲಿ ನೇರ ಭಾಗಿಯಾದ ಆರೋಪಿಗಳಿಗಾಗಿ ಹುಡುಕಾಟ ಇನ್ನೂ ಮುಂದುವರಿದಿದೆ.