ಬೆಂಗಳೂರು : ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಅವರು ಸುಗಮ ಸಂಗೀತ ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು.
ಅವರ ‘ ಕಾಡು ಕುದುರೆ ಓಡಿ ಬಂದಿತ್ತಾ ‘ ಗೀತೆಯು ಇಂದಿಗೂ ಅಭಿಮಾನಿಗಳು ಗುನುಗುನಿಸುವ ಹಾಡು. ಇದಕ್ಕಾಗಿ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿಗೂ ಭಾಜನರಾದರು.
ಸಂತ ಶಿಶುನಾಳ ಶರೀಫರ ಗೀತೆಗಳಿಗೆ ದನಿಯಾಗಿ ಅವುಗಳನ್ನು ಇನ್ನಷ್ಟು ಎತ್ತರಕ್ಕೆ ಒಯ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
ಅವರ ನಿಧನದಿಂದ ಸುಗಮ ಸಂಗೀತ ಕ್ಷೇತ್ರದ ಒಬ್ಬ ಶ್ರೇಷ್ಠ ಗಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.



