ಮಲ್ಲೇಶ್ವರಂ ಕ್ಷೇತ್ರದ 50 ಸಾವಿರ ಮನೆಗಳಲ್ಲಿ ಧ್ವಜಾರೋಹಣ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

ಬೆಂಗಳೂರು: ಹರ್ ಘರ್ ತಿರಂಗಾ ಆಚರಣೆಯ ಅಂಗವಾಗಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50 ಸಾವಿರ ಮನೆಗಳ ಮೇಲೆ ರಾಷ್ಟ್ರಧ್ವಜಾರೋಹಣ ನಡೆಯಲಿವೆ ಎಂದು ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಶುಕ್ರವಾರ ತಮ್ಮ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಹರ್ ಘರ್ ತಿರಂಗಾ ಆಶಯ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲಾ ಮಕ್ಕಳು ಮತ್ತು ಎನ್ ಸಿಸಿ ಕೆಡೆಟ್ ಗಳು ಭಾಗವಹಿಸಿದ್ದರು.

ಆಜಾದಿ ಕಾ ಅಮೃತ ಮಹೋತ್ಸವಕ್ಕಾಗಿ ಮಲ್ಲೇಶ್ವರಂನ ಸರಕಾರಿ ಶಾಲಾ ಮಕ್ಕಳೇ ಉಪಗ್ರಹ ಅಭಿವೃದ್ಧಿ ಪಡಿಸುವ ಯೋಜನೆ ಪ್ರಗತಿಯಲ್ಲಿದ್ದು, ಇದಕ್ಕೆ ಗೌರವಾರ್ಥವಾಗಿ ದಿವಂಗತ ನಟ ಪುನೀತ್ ಅವರ ಹೆಸರನ್ನು ಇಡಲಾಗಿದೆ ಎಂದು ಅವರು ನುಡಿದರು.

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 75 ವಾರಗಳ ಆಚರಣೆಯನ್ನು ರೂಪಿಸಿದ್ದಾರೆ. ಈ ಮೂಲಕ ಅವರು ದೇಶದಲ್ಲಿ ಅಭಿವೃದ್ಧಿಯ ಅಮೃತ ಕಾಲವನ್ನೇ ಸೃಷ್ಟಿಸಿದ್ದಾರೆ ಎಂದು ಸಚಿವರು ಬಣ್ಣಿಸಿದರು. ಇದೇ ಕಾರ್ಯಕ್ರಮದಲ್ಲಿ ಕೆಲವು ಮಹಿಳೆಯರು ಸಚಿವರೊಂದಿಗೆ ರಕ್ಷಾ ಬಂಧನವನ್ನು ಸಹ ಆಚರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ, ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ಮುಂತಾದವರಿದ್ದರು.

About The Author