ಮಾಜಿ ಎಂಎಲ್ಸಿ ಮರಿಲಿಂಗೇಗೌಡ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆ

ರಾಮನಗರ: ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿಲಿಂಗೇಗೌಡ ಮತ್ತು ಇನ್ನೂ ಹಲವರು ಶನಿವಾರ ಜೆಡಿಎಸ್ ಗೆ ವಿದಾಯ ಹೇಳಿ, ಬಿಜೆಪಿ ಸೇರಿಕೊಂಡರು.

ಇಲ್ಲಿಗೆ ಸಮೀಪವಿರುವ ಹನುಮಂತನಗರದ ಮನೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಇವರನ್ನೆಲ್ಲ, ಪಕ್ಷದ ಕೇಸರಿ ಅಂಗವಸ್ತ್ರವನ್ನು ಹಾಕುವ ಮೂಲಕ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಮರಿಲಿಂಗೇಗೌಡರ ಮನೆಯಲ್ಲೇ ಜೈಶಂಕರ್ ಅವರು ಗೌಡರನ್ನು ಸ್ವಾಗತಿಸಿದರು. ಈ ಸಂದರ್ಬದಲ್ಲಿ ತಾಪಂ ಮಾಜಿ ಅಧ್ಯಕ್ಷ ಈರೇಗೌಡ, ಬಮೂಲ್ ಮಾಜಿ ನಿರ್ದೇಶಕ ಮರಿಯಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ಮರಿಲಿಂಗೇಗೌಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ‘ಬಿಜೆಪಿ ಮಾತ್ರ ಎಲ್ಲರಿಗೂ ಮುಕ್ತ ಅವಕಾಶ ನೀಡುವ ಪಕ್ಷವಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಸಂಸ್ಕೃತಿಯನ್ನು ಹೊಂದಿದೆ. ಮರಿಲಿಂಗೇಗೌಡರ ಸೇರ್ಪಡೆ ಯಿಂದ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಬಲ ಬಂದಿದೆ’ ಎಂದರು.

ಕಾಂಗ್ರೆಸ್ಸನ್ನು ದೇಶದ ಜನ ತಿರಸ್ಕರಿಸಿದ್ದಾರೆ. ಜೆಡಿಎಸ್ ಬರೀ ಒಂದು ಕುಟುಂಬಕ್ಕೆ ಜೋತು ಬಿದ್ದಿರುವ ಊಳಿಗಮಾನ್ಯ ಪಕ್ಷವಾಗಿದೆ. ಬಿಜೆಪಿ ಮಾತ್ರ ದೇಶದ ಜನರಲ್ಲಿ ಭರವಸೆ ಹುಟ್ಟಿಸಿದ್ದು, ಅಭಿವೃದ್ಧಿ ಕೇಂದ್ರಿತ ರಾಜಕಾರಣದಲ್ಲಿ ನಂಬಿಕೆ ಹೊಂದಿದೆ ಎಂದು ಅವರು ನುಡಿದರು.

ಮರಿಲಿಂಗೇಗೌಡರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿಯವರ ಜನಪರ ಮತ್ತು ಬದ್ಧತೆಯ ಆಡಳಿತ ಕಂಡು ಬಿಜೆಪಿ ಸೇರುತ್ತಿದ್ದೇನೆ. ದೇಶವನ್ನು ಬಲಿಷ್ಠ ವಾಗಿ ಕಟ್ಟುವುದು ಮತ್ತು ಪ್ರಜಾಪ್ರಭುತ್ವದ ಉಳಿವು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದರು.

About The Author