ಶಿವಮೊಗ್ಗ: ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಲಾಗಿದ್ದಂತ ವಿ ಡಿ ಸಾವರ್ಕರ್ ಅವರ ಪೋಟೋ ತೆರವುಗೊಳಿಸಿದ್ದರಿಂದಾಗಿ, ಮತ್ತೆ ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ಭುಗಿಲೆದ್ದಿದೆ. ಈ ಹಿನ್ನಲೆಯಲ್ಲಿಯೇ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅವರು, ನಗರದಲ್ಲಿ ವಿ ಡಿ ಸಾವರ್ಕರ್ ಪ್ಲೆಕ್ಸ್ ತೆರವು ವಿವಾದದಿಂದಾಗಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಇಂದಿನಿಂದ ಮೂರು ದಿನ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಅಂದಹಾಗೇ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದ ಇಂದು ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ವಿ ಡಿ ಸಾವರ್ಕರ್ ಅವರ ಪೋಟೋ ಕಟ್ಟಲಾಗಿತ್ತು. ಈ ಫ್ಲೆಕ್ಸ್ ಅನ್ನು ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ತೆಗೆದು ಹಾಕಲು ಮುಂದಾಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಕಿಡಿಗೇಡಿಗಳನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು.
ವಿ ಡಿ ಸಾವರ್ಕರ್ ಫ್ಲೆಕ್ಸ್ ತೆಗೆದು ಹಾಕಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವಣ ಉಂಟಾಗಿತ್ತು. ಫ್ಲೆಕ್ಸ್ ತೆಗೆದಿದ್ದ ಸ್ಥಳದಲ್ಲಿಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಟೋ ಇಡೋದಕ್ಕೆ ಒತ್ತಾಯಿಸಿದರು. ಅಲ್ಲದೇ ಸರ್ಕಲ್ ನಲ್ಲೇ ಫ್ಲೆಕ್ಸ್ ಕಟ್ಟಬೇಕು ಎಂದು ಪಟ್ಟು ಹಿಡಿದರು. ಆದ್ರೇ ಸಾವರ್ಕರ್ ಪ್ಲೆಕ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಾಗ, ಸ್ಥಳದಲ್ಲಿಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಧರಣಿ ಆರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿಯೇ ಮುಂಜಾಗ್ರತಾ ಕ್ರಮವಾಗಿ ನಗರದಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.