ಬೆಂಗಳೂರು: ಕಳೆದ ವರ್ಷ ಅವಕಾಶ ಸಿಗದೇ ವರ್ಗಾವಣೆ ನಿರೀಕ್ಷೆಯಲ್ಲಿರುವಂತ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ ನೀಡಲಾಗಿದೆ. ಸೆಪ್ಟೆಂಬರ್ 2022-23ನೇ ಸಾಲಿನ ಸಾಮಾನ್ಯ ವರ್ಗಾವಣೆ ನಡೆಸಲು ಅನುಮತಿಯನ್ನು ಸರ್ಕಾರ ನೀಡಿದೆ.
ಈ ಸಂಬಂಧ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಆಯುಕ್ತರಾದಂತ ಡಾ.ಆರ್.ವಿಶಾಲ್ ಅವರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಮದಂತೆ ವರ್ಗಾವಣೆ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಶಿಕ್ಷಕರು ವರ್ಗಾವಣೆ ಸಂಬಂಧ ಪೂರ್ವಭಾವಿಯಾಗಿ ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಪರಿಶೀಲಿಸಿ, ನಿಖರ ಮಾಹಿತಿಯನ್ನು ಸೆ.2ರೊಳಗೆ ಅಪ್ ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಿಕ್ಷಕ ಮಿತ್ರದಲ್ಲಿ ಅಪ್ ಲೋಡ್ ಮಾಡುವ ವಿವರಗಳನ್ನು ಮಾತ್ರವೇ ವರ್ಗಾವಣೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.




