ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವಂತ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರಿಗೆ ಕೋರ್ಟ್ ಸೆಪ್ಟೆಂಬರ್ 5ರವರೆಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಈ ಸಂಬಂಧ ಇಂದು ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದಂತ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟ್ ನ ನ್ಯಾಯಾಧೀಶರ ಮುಂದೆ, ಪೊಲೀಸರು ಪ್ರಕರಣದ ವಿಚಾರಣೆ ಸಂಬಂಧ ತಮ್ಮ ವಶಕ್ಕೆ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪರಿಗಣಿಸಿದಂತ ಕೋರ್ಟ್, ಸೆಪ್ಟೆಂಬರ್ 5ರವರೆಗೆ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಅಂದಹಾಗೇ ನಿನ್ನೆ ಮುರುಘಾ ಶ್ರೀಗಳನ್ನು ಪೊಲೀಸರು ಪೋಕ್ಸೋ ಕೇಸ್ ನಲ್ಲಿ ಬಂಧಿಸಿದ್ದರು. ಅಲ್ಲದೇ ರಾತ್ರೋ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಅವರಿಗೆ ಇಂದಿನವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಹೀಗಾಗಿ ಇಂದು ಮತ್ತೆ ವಿಚಾರಣೆ ನಡೆಸಿದಂತ ಕೋರ್ಟ್, ಈಗ ಖಾಕಿ ವಶಕ್ಕೆ ನೀಡಿ ಆದೇಶಿಸಿದೆ.




