ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ವಿರಾಜಪೇಟೆ ಶಾಸಕ ಬರೆದ ಪತ್ರಕ್ಕೆ ಸ್ಪಂದಿಸಿರೋ ಬಿಎಸ್ವೈ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಆಚರಣೆಗೆ ಬ್ರೇಕ್ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಸರ್ಕಾರಿ ಆಚರಣೆಯನ್ನಾಗಿ ಘೋಷಣೆ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ಇದೀಗ ಸೇಡು ತೀರಿಸಿಕೊಂಡಿದೆ. ಟಿಪ್ಪು ಕುರಿತಾಗಿ ನಾನಾ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಿತ್ತು. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಬಾರದೆಂದು ಬಿಜೆಪಿ ಅದೆಷ್ಟೇ ಹೇಳಿದ್ರೂ ಸಹ ಪಟ್ಟು ಸಡಿಲಿಸದ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಸರ್ಕಾರಿ ಆಚರಣೆಯನ್ನಾಗಿ ಘೋಷಣೆ ಮಾಡಿದ್ರು. ಆದ್ರೆ ಇದೀಗ ಕಾಲ ಚಕ್ರ ಬದಲಾಗಿದೆ. ಬಿಎಸ್ವೈ ಅಧಿಕಾರಕ್ಕೆ ಬರುತ್ತಿದ್ದಂತೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ಅಂದಹಾಗೆ ವಿರಾಜಪೇಟೆಯ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಟಿಪ್ಪು ಜಯಂತಿ ರದ್ದುಗೊಳಿಸಬೇಕೆಂದು ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಸ್ಪಂದಿಸಿರುವ ಸಿಎಂ ಬಿಎಸ್ವೈ ಈ ಆದೇಶ ಹೊರಡಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸೋ ಹಿನ್ನೆಲೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಸಿ.ಟಿ ರವಿ ಮತ್ತು ಅನಂತ್ ಕುಮಾರ್ ಹೆಗಡೆ ವಿರುದ್ಧ ಕೋಮುಸೌಹಾರ್ದತೆ ಕದಡುವ ಯತ್ನದ ಆರೋಪದಡಿ ದೂರು ಸಹ ದಾಖಲಾಗಿತ್ತು. ಇನ್ನು ಸೇಡಿನ ರಾಜಕಾರಣ ಮಾಡಲ್ಲಾ ಅಂತ ಹೇಳಿದ್ದ ಸಿಎಂ ಯಡಿಯೂರಪ್ಪ ಅಧಿಕಾರಕ್ಕೇರುತ್ತಿದ್ದಂತೆ ಹಿಂದಿನ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಹೊರಡಿಸಿದ್ದ ಅಧಿಸೂಚನೆಗೆ ತಡೆ ಹಿಡಿದಿದ್ರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸೋ ಮೂಲಕ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.