Tumkuru News:
ಗುಬ್ಬಿ, ತುಮಕೂರು: ರಾಜ್ಯದಲ್ಲೇ ಅತೀ ಹೆಚ್ಚು ಸಾಗುವಳಿ ಚೀಟಿ ವಿತರಣೆಯಲ್ಲಿ ಗುಬ್ಬಿ ಕ್ಷೇತ್ರವೂ ಒಂದು. ಆದರೆ ಇಂದು ಗುಬ್ಬಿಯ ಬಗರ್ ಹುಕುಂ ಸಭೆಯಲ್ಲಿ ಒಂದು ನಾಟಕೀಯ ಬೆಳವಣಿಗೆ ನಡೆದಿದೆ.
ತಾಲ್ಲೂಕಿನ ಶಾಸಕರು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿ ಹಾಗೂ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷದ ಮುಖಂಡರನ್ನು ತಾಲ್ಲೂಕಿನ ಬಗರ್ ಹುಕುಂ ಸಮಿತಿಯ ಸದಸ್ಯರನ್ನಾಗಿ ನೇಮಿಸುವುದು ಸರ್ವೇ ಸಾಮಾನ್ಯ. ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರವು ತಮ್ಮ ಪಕ್ಷದ ನಾಯಕರುಗಳನ್ನ ಬಗರ್ ಹುಕುಂ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ. 40 – 50 ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿರುವ ಬಡ ರೈತರು ಕೊನೆಗೂ ತಮಗೆ ತಮ್ಮ ಜಮೀನಿನ ಹಕ್ಕು ಪತ್ರ ದೊರಕಲಿದೆ ಎಂಬ ಆಸೆಯಿಂದ ಇಂದು ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಗೆ ಹಾಜರಾದರೆ ಅವರಿಗೆ ಆಗಿದ್ದು ಮಾತ್ರ ನಿರಾಸೆ. ಬಗರ್ ಹುಕುಮ್ ಸಮಿತಿಯ ಅಧ್ಯಕ್ಷರಾದ, ಶಾಸಕ ಶ್ರೀ ಎಸ್.ಆರ್. ಶ್ರೀನಿವಾಸ್ ಜೊತೆಗೆ ತಾಲ್ಲೂಕಿನ ದಂಡಾಧಿಕಾರಿಗಳೂ ಸಹ ಸುಮಾರು 45 ನಿಮಿಷ ಕಾದರೂ ಸಹ ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರು ಬರಲಿಲ್ಲ. ವಾರದ ಹಿಂದೆಯೇ ಸಮಿತಿಯ ಎಲ್ಲಾ ಸದಸ್ಯರಿಗೂ ಸಭೆಯ ಕುರಿತು ಪತ್ರದ ಮುಖೇನ ಮತ್ತು ಮೌಖಿಕವಾಗಿಯೂ ಮಾಹಿತಿ ನೀಡಿದ್ದರೂ ಸಹ, ಸಭೆಗೆ 45 ನಿಮಿಷ ತಡವಾಗಿ ಬಂದರು.
ನಾಲ್ಕೈದು ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದ ಬಡ ರೈತರಿಗೆ ಸಾಗುವಳಿ ಚೀಟಿ ಕೊಡುವಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಭಾವಿಸಿದ ಶಾಸಕರು ತಮ್ಮ ಇತರೆ ಕಾರ್ಯಕ್ರಮಗಳನ್ನೆಲ್ಲ ಬದಿಗಿಟ್ಟು ಸಭೆಯಲ್ಲಿ ಬಿಜೆಪಿ ನಾಮ ನಿರ್ದೇಶಿತ ಸದಸ್ಯರಿಗೆ ಕಾದು ಕುಳಿತರು. ತಡವಾಗಿ ಬಂದ ಬಿಜೆಪಿ ಬಗರ್ ಹುಕುಂ ಸದಸ್ಯರು, ಸಭೆಯಲ್ಲಿ ಏರು ದ್ವನಿಯಲ್ಲಿ “ನಾವು ಯಾವುದೇ ಕಾರಣಕ್ಕೂ ಸಾಗುವಳಿ ಚೀಟಿ ನೀಡಲು ಬಿಡುವುದಿಲ್ಲ, ನಾವು ಇದಕ್ಕೆ ಸಹಿ ಹಾಕುವುದಿಲ್ಲ. ಚುನಾವಣೆಗೆ 5-6 ತಿಂಗಳಿರುವಾಗ ಈಗ ಸಾಗುವಳಿ ಚೀಟಿ ನೀಡಿದರೆ, ಶಾಸಕರಿಗೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ, ಇದಕ್ಕೆ ನಾವು ಅವಕಾಶ ಮಾಡಿಕೊಡುವುದುದಿಲ್ಲ” ಎಂದು ನೇರವಾಗಿಯೇ ತಮ್ಮ ರಾಜಕೀಯ ಉದ್ದೇಶವನ್ನು ಬಹಿರಂಗ ಪಡಿಸಿದರು.
ಇದಕ್ಕೆ ಪ್ರತಕ್ರಯಿಸಿದ ಶಾಸಕರು “ಉಳಿಮೆ ಚೀಟಿ ನೀಡುವ ವಿಷಯದಲ್ಲಿ ರಾಜಕೀಯ ಬೇಡ. ಬೇಕಿದ್ದರೆ ರೈತರ ಜಮೀನುಗಳಿಗೆ ನೀವೇ ಭೇಟಿ ನೀಡಿ, ನಿಮ್ಮ ಕೈಯ್ಯಾರೆ ಸಾಗುವಳಿ ಚೀಟಿ ನೀಡಿ. ಆದರೆ ಬಡ ರೈತರಿಗೆ ಅನ್ಯಾಯ ಮಾಡಬೇಡಿ” ಎಂದು ಬಿಜೆಪಿಯ ಬಗರ್ ಹುಕುಂ ನಾಮ ನಿರ್ದೇಶಿತ ಸದಸ್ಯರಿಗೆ ಶಾಸಕ ಗುಬ್ಬಿ ಶ್ರೀನಿವಾಸ್ ಎಷ್ಟೇ ಮನವಿ ಮಾಡಿದರೂ ಸಹ ತಮ್ಮ ಸಹಿ ಹಾಕಲು ಬಿಜೆಪಿ ಮುಖಂಡರು ಕೊನೆಗೂ ಒಪ್ಪಲೇ ಇಲ್ಲ. ಇದರಿಂದ ಮನ ನೊಂದ ರೈತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಬಿಜೆಪಿಯ ರೈತ ವಿರೋಧಿ ಧೋರಣೆಗೆ ಧಿಕ್ಕಾರ ಕೂಗಿದರು. ರೈತರು ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರ ಶರ್ಟ್ ಹಿಡಿದೆ ಎಳೆದಾಡಿದ ಪ್ರಸಂಗವೂ ನಡೆಯಿತು.
ಕಾನ್‌ಸ್ಟೇಬಲ್ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!