political news
ಬೆಂಗಳೂರು(ಫೆ.14): ಈಗಾಗಲೇ ವಿಧಾಸಭಾ ಚುನಾವಣೆ ರಾಜ್ಯದಲ್ಲಿ ಕುತೂಹಲಕಾರಿ ಘಟ್ಟಕ್ಕೆ ತಲುಪುತ್ತಿದೆ. ರಾಜ್ಯದಲ್ಲಿ ಪತೀ ಹಳ್ಳಿಗಳ ಕಡೆಯೂ ರಾಜಕೀಯ ವ್ಯಕ್ತಿಗಳು ಧಾವಿಸಿ ಜನರ ಮನಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 9 ರಾಜ್ಯಗಳ ವಿಧಾನಸಭೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿಯೇ ಸಾಧಿಸುತ್ತೆ ಎಂದು ಮಾಧ್ಯಮಗಳಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಜೊತೆಗೆ ಇತರ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ 9 ರಾಜ್ಯಗಳ ಪೈಕಿ ಮಿಝೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ಹೊರತುಪಡಿಸಿ ಉಳಿದ 6 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಹೀಗಾಗಿ, ಬಿಜೆಪಿಗೆ ಈ ರಾಜ್ಯಗಳ ಚುನಾವಣೆ ಗೆಲ್ಲುವುದು ಬಹಳ ಮುಖ್ಯ. ಎಎನ್ಐ ಸಂದರ್ಶನದಲ್ಲಿ ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಗುರುತಾಗಿರುವ ಅಮಿತ್ ಶಾ ಮಾತನಾಡಿ, ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಜನಾದೇಶ ಸಿಗುತ್ತದೆ. ಮಂಡ್ಯದ ಜನರೂ ವಂಶಾಡಳಿತದ ಪಕ್ಷಗಳಿಂದ ದೂರವಾಗಿ ಬಿಜೆಪಿಯ ಅಭಿವೃದ್ಧಿ ರಾಜಕೀಯವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕಕ್ಕೆ ಶುಭ ಸೂಚನೆ ಎಂದು ತಮ್ಮ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. ಇವತ್ತು ದೇಶಕ್ಕೆ ಬುಡಕಟ್ಟು ಸಮುದಾಯದಿಂದ ಮೊದಲ ಬಾರಿಗೆ ರಾಷ್ಟ್ರಪತಿ ಸಿಕ್ಕಿದ್ದಾರೆ. ಬಡ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲವು ಯಾವುದೇ ಭೇದವಿಲ್ಲದೇ ಬುಡಕಟ್ಟು ಸಮುದಾಯಕ್ಕೂ ಸಿಗುತ್ತಿದೆ ಎಂದು ಗೃಹ ಸಚಿವ ತಿಳಿಸಿದ್ದಾರೆ.