ಕೋಲಾರ:
ಕಾಂಗ್ರೆಸ್ ಪಕ್ಷದವರು ನೀಡಿರುವ ನಾಲ್ಕು ಗ್ಯಾರಂಟಿಯಲ್ಲಿ ಜನರಿಗೆ ಉಪಯೋಗವಾಗುವುದು ಒಂದೇ ಗ್ಯಾರಂಟಿ. ಅವರ ಕೈಯಲ್ಲಿ ಕೊಡೋಕೆ ಆಗುವುದು ಅಕ್ಕಿ ಮಾತ್ರ. ಉಳಿದವು ಯಾವುದೂ ಕೊಡೋದಕ್ಕೆ ಆಗಲ್ಲ. ಅವೆಲ್ಲಾ ಚುನಾವಣಾ ಗಿಮಿಕ್ ಅಷ್ಟೇ ಎಂದು ಮಾಲೂರಿನಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಅವರು ವಾಗ್ದಾಳಿ ನಡೆಸಿದರು.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರು 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಬುದ್ಧಿ ಇದೆಯಾ? ರಾಜ್ಯದಲ್ಲಿ 90% ಜನ ಕರೆಂಟ್ ಬಿಲ್ ಕಟ್ಟದಿದ್ರೆ ಹಣ ಹೇಗೆ ಬರುತ್ತೆ. ಕಾಂಗ್ರೆಸ್ ನವರನ್ನು ನಂಬಿಕೊಂಡರೆ ರಾಜ್ಯ ಬಡ ಆಗುತ್ತೆ. ನನ್ನ ಮನೆಯಲ್ಲೇ 160 ಯೂನಿಟ್ ವಿದ್ಯುತ್ ಓಡುತ್ತೆ. ಆಗಾದ್ರೆ ನನಗೂ ಕರೆಂಟ್ ಫ್ರೀ ಕೊಡ್ತಾರಾ? ಬಡವರಿಗೆ ಮಾತ್ರ ಕರೆಂಟ್ ಫ್ರೀ ಕೊಡಲಿ. ಕಾಂಗ್ರೆಸ್ ನವರಿಗೆ ಯಾರಿಗೆ ಉಚಿತವಾಗಿ ಕೊಡಬೇಕು ಎಂಬ ಪ್ರಜ್ಞೆ ಇಲ್ಲ. ಎಲ್ಲವನ್ನೂ ಉಚಿತವಾಗಿ ಕೊಟ್ಟರೆ ಏನು ಅಭಿವೃದ್ಧಿ ಮಾಡುತ್ತೀರಿ? ಎಂದು ಹರಿಹಾಯ್ದರು.
ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷದವರು ಏನೂ ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಈಗ ಗ್ಯಾರಂಟಿ ಕೊಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಜನರು ಓಡಾಡುವ ರಸ್ತೆಗಳನ್ನು ಅಭಿವೃದ್ಧಿ ಮಾಡಿಲ್ಲ, ಬದಲಿಗೆ ಕುಮಾರಸ್ವಾಮಿ ಅವರು ಕೊಟ್ಟಂತಹ ಹಣವನ್ನು ಕಾಂಗ್ರೆಸ್ ಶಾಸಕರು ಅವರ ತೋಟಗಳಿಗೆ ಕಾಂಕ್ರಿಟ್ ರಸ್ತೆ ಮಾಡಿಕೊಂಡಿದ್ದಾರೆ ಎಂದು ಶಾಸಕ ನಂಜೇಗೌಡ ವಿರುದ್ಧ ಆರೋಪ ಮಾಡಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯವರು ಏನು ಕೊಟ್ರೂ ಜನ ತಗೋತಾರೆ. ಆದ್ರೆ ಅವರ್ಯಾರು ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕುವುದಿಲ್ಲ. ಲೂಟಿ ಮಾಡಿರುವ ಹಣದಲ್ಲಿ ಅವರು ಕೊಡ್ತಿರೋದ್ರಿಂದ ಜನ ಸೇರ್ತಿದ್ದಾರೆ. ಬಿಜೆಪಿ ಒಂದು ಭ್ರಷ್ಟ ಸರ್ಕಾರ. 40% ಕಮೀಷನ್ ತಗೋತಾರೆ ಎಂದು ಎಲ್ಲಾ ಕಾಂಟ್ರಾಕ್ಟರ್ ಗಳು ಹೇಳ್ತಿದಾರೆ. ಚುನಾವಣೆ ಸಮಯದಲ್ಲಿ ಮೋದಿಯವರು ಹಲವು ಕಾಮಗಾರಿಗಳಿಗೆ ಚಾಲನೆ ಕೊಟ್ಟು ಹೋಗ್ತಾರೆ. ಇವೆಲ್ಲಾ ಚುನಾವಣೆ ಗಿಮಿಕ್ ಅಷ್ಟೇ. ಬರೀ ಆಶ್ವಾಸನೆಗಳನ್ನು ಕೊಟ್ಟು ಹೋಗ್ತಾರೆ. ಕೆಲಸ ಮಾಡೋದು ಏನೂ ಇಲ್ಲ. ಕೊರೊನಾ ಸಮಯದಲ್ಲಿ ಬೇಕಾದಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಳೆದ 20 ವರ್ಷದಿಂದ ನಾನು ಮಾಡಿರುವ ಸೇವೆಯನ್ನು ಗುರುತಿಸಿ ಜೆಡಿಎಸ್ ಪಕ್ಷಕ್ಕೆ ಜನ ಮತ ನೀಡುತ್ತಾರೆ. ಸಿಎಂ ಆಗುವ ಅರ್ಹತೆ ಇರುವುದು ಕುಮಾರಸ್ವಾಮಿ ಅವರಿಗೆ ಮಾತ್ರ. ದೇವೇಗೌಡರು ಹಾಗೂ ಕುಮಾರಣ್ಣ ಮಾಡಿರುವ ಕೆಲಸಗಳನ್ನು ಮೆಚ್ಚಿ ಈ ಬಾರಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಬೈಟ್- ಜಿ ಇ ರಾಮೇಗೌಡ – ಜೆಡಿಎಸ್ ಅಬ್ಯರ್ಥಿ