ಬೆಂಗಳೂರು : ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಮುಂದಿಟ್ಟುಕೊಂಡು ಯಡಿಯೂರಪ್ಪರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದ್ದ ಸೈಟ್ ಹಂಚಿಕೆಗಳ ಬಗ್ಗೆ ತನಿಖೆಗೆ ಸೂಚಿಸಿ ಸಿದ್ದರಾಮಯ್ಯರನ್ನು ಕಾನೂನಿನ ಕುಣಿಕೆ ಸಿಲುಕಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಕ್ಟೋಬರ್ ೨೩ ರಂದು ಎಸಿಬಿಗೆ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಬಿಡಿಎ ಆಯುಕ್ತರಿಗೆ ಸೈಟ್ಗಳ ಹಂಚಿಕೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.ಬಿಡಿಎ ಕಚೇರಿಗೆ ಭೇಟಿ ನೀಡಿದ್ದ ಎಸಿಬಿ ಎಸ್ಪಿ ಜಿನೇಂದ್ರ ಕಣಗಾವಿ ಮತ್ತು ಓರ್ವ ಡಿವೈಎಸ್ಪಿ ಆಯುಕ್ತರಿಗೆ ೨೦೧೪-೧೫ ಹಾಗೂ ೨೦೧೫-೧೭ ರಲ್ಲಿ ಸಿದ್ದರಾಮಯ್ಯ ಸಿಎಂ ಅವಧಿಯ ನಾಲ್ಕು ವರ್ಷಗಳಲ್ಲಿ ಹಂಚಿಕೆಯಾಗಿದ್ದ ಕಾರ್ನರ್ ಸೈಟ್, ಸಿಎ ಸೈಟ್ ಬಿಡಿಎ ಸೈಟ್ಗಳ ಹಂಚಿಕೆ ಬಗ್ಗೆ ಮಾಹಿತಿ ಕೇಳಿದ್ದಾರೆ.
ಜಾರ್ಜ್ ಗೆ ಸಂಕಷ್ಟ: ಬಿಜೆಪಿ ಸರ್ಕಾರ ಎಸಿಬಿ ಕಾಂಗ್ರೆಸ್ ಸರ್ಕಾರದ ಅವಧಿಯ ಬಿಡಿಎ ಸೈಟ್ಗಳ ಹಂಚಿಕೆಯ ತನಿಖೆ ಕೈಗೊಂಡಿರುವುದರಿಂದ ಮಾಜಿ ಸಚಿವ ಕೆ.ಜೆ ಜರ್ಜ್ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಈ ವೇಳೆ ಬಿಡಿಎ ಸೈಟ್ ಹಂಚಿಕೆ ಹಾಗೂ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು.
ತಿರುಗುಬಾಣ: ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಭ್ರಷ್ಟಚಾರ ನಿಗ್ರಹದಳ(ಎಸಿಬಿ) ಸ್ಥಾಪಿಸಿದ್ದರು. ಲೋಕಾಯುಕ್ತ ಸಂಸ್ಥೆ ಇದ್ದಾಗಲೂ, ಸಮರ್ಥ ಲೋಕಾಯುಕ್ತರನ್ನು ನೇಮಿಸದೇ, ಅದನ್ನು ಬಲಪಡಿಸದೇ, ಎಸಿಬಿ ರಚನೆ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ತಮ್ಮ ಬೆಂಬಲಿಗರನ್ನ ರಕ್ಷಿಸಲು ಎಸಿಬಿ ರಚಿಸಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡಿದ್ದರು.