Monday, December 23, 2024

Latest Posts

Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!

- Advertisement -

Hassan News :ಹಾಸನ: ಜಿಲ್ಲೆಯ ಎರಡು ಕಡೆ ಒಂದೇ ದಿನ ೨ ಚಿರತೆ ಸೆರೆ ಸಿಕ್ಕಿವೆ. ಅರಸೀಕೆರೆ ತಾಲೂಕಿನಲ್ಲಿ ತನ್ನ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಯುವಕ ಹಾಗೂ ಇತರರು ಸೆರೆ ಹಿಡಿದು ಕೈಕಾಲು ಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದರೆ, ಹಾಸನ ತಾಲೂಕಿನಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಂತರ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ.
ಅರಸೀಕೆರೆ ವರದಿ: ತಾಲೂಕಿನ ಗಂಡಸಿ ಹೋಬಳಿ ಬಾಗೇವಾಳು ಗ್ರಾಮದಲ್ಲಿ
ಯುವಕನೊಬ್ಬ ತನ್ನ ಮೇಲೆ ದಾಳಿ ಮಾಡಲು ಬಂದ ಚಿರತೆಯಿಂದ ಅದೃಷ್ಟವಶಾತ್ ಬಚಾವಾಗಿರುವುದಲ್ಲದೆ, ಅದನ್ನು ಚಿರತೆ ಸೆರೆ ಹಿಡಿದು ಸಾಹಸ ಪ್ರದರ್ಶನ ಮಾಡಿದ್ದಾನೆ.
ವೇಣುಗೋಪಾಲ್ ಅಲಿಯಾಸ್ ಮುತ್ತು ಶುಕ್ರವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ಎಂದಿನಂತೆ ತಮ್ಮ ತೋಟದ ಬಳಿ ಹೋಗಿದ್ದಾನೆ.
ಈತನನ್ನು ಕಂಡೊಡನೆ ಚಿರತೆ ದಾಳಿ ಮಾಡಲು ಬಂದಿದೆ. ಇದರಿಂದ ಎದೆ ಗುಂದದ ಮುತ್ತು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಮನಮೆಚ್ಚಿದ ಹುಡುಗಿ ಚಿತ್ರದ ನಾಯಕರ ರೀತಿ ಚಿರತೆಯೊಂದಿಗೆ ಏಕಾಂಗಿ ಹೋರಾಡಿದ್ದಾನೆ.
ಈತನೊಂದಿಗೆ ಸೆಣೆಸಲಾಗದೆ ಸುಸ್ತಾದ ಚಿರತೆ ಓಡಲು ಆರಂಭಿಸಿದೆ. ಆದರೂ ಬಿಡದೆ ಬೆನ್ನಟ್ಟಿ ಹಿಡಿದು ಅದರ ಕೈಕಾಲು ಕಟ್ಟಿದ್ದಾನೆ. ಈ ವೇಳೆ ವನ್ಯಜೀವಿ ಕೊಸರಾಡಿದ್ದರಿಂದ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಷ್ಟೆಲ್ಲ ಆದರೂ, ಚಿರತೆಯ ನಾಲ್ಕೂ ಕಾಲುಗಳನ್ನು ಕಟ್ಟಿದ ಬಳಿಕ ತನ್ನ ಬೈಕಿನ ಹಿಂಬದಿಗೆ ಕಟ್ಟಿಕೊಂಡು ನೇರವಾಗಿ ಗ್ರಾಮಕ್ಕೆ ಬಂದಿದ್ದಾನೆ.
ಅಲ್ಲಿಂದ ಅರಣ್ಯ ಇಲಾಖೆಗೆ ತೆರಳಿ ಚಿರತೆಯನ್ನು ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾನೆ. ಇದನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿದೆ. ಬಲಿಷ್ಠ ಪ್ರಾಣಿಯಾಗಿರುವ ಚಿರತೆಯನ್ನು ಸೆರೆ ಹಿಡಿದು ಬೈಕ್‌ನಲ್ಲಿ ಕಟ್ಟಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿರುವ ಮುತ್ತು ಸಾಹಸ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಕೊಂಚ ನಿತ್ರಾಣಗೊಂಡಿರುವ ಚಿರತೆಗೆ ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ವರದಿ: ಮತ್ತೊಂದೆಡೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ವಾಸದ ಮನೆಗೆ ನುಗ್ಗಿದ್ದ ಚಿರತೆಯೊಂದನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಗ್ರಾಮದ ಧರ್ಮ ಎಂಬುವರು ತಮ್ಮ ಜಮೀನಿನ ಬಳಿ ಮನೆ ಕಟ್ಟಿಕೊಂಡು ಕುಟುಂಬದ ಜೊತೆ ಅಲ್ಲಿಯೇ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ೧.೩೦ ರ ಸುಮಾರಿಗೆ ಅದೇ ಮನೆಗೆ ಚಿರತೆ ನುಗ್ಗಿತ್ತು. ಮನೆಗೆ ಹೊಂದಿಕೊಂಡಂತೆ ಇರುವ ದನದ ಕೊಟ್ಟಿಗೆಯಲ್ಲಿ ಜಾನುವಾರು ಕಟ್ಟಿದ್ದರಿಂದ ಆಹಾರದ ಆಸೆಗೆ ಒಳ ಪ್ರವೇಶಿಸಿ ಗೊಂತುವಿನಲ್ಲಿ (ಜಾನುವಾರುಗಳಿಗೆ ಮೇವು ಹಾಕುವ ಸ್ಥಳ) ಸಿಲುಕಿಕೊಂಡಿತ್ತು. ಅದೃಷ್ಟವಶಾತ್ ಹಸುಗಳ ಮೇಲೆ ಚಿರತೆ ದಾಳಿ ಮಾಡಿರಲಿಲ್ಲ.
ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು. ಗ್ರಾಮಸ್ಥರೊಬ್ಬರು ಮೊದಲು ಮನೆಯ ಹೆಂಚು ತೆಗೆದು ಕುಡುಗೋಲಿನಿಂದ ಹಸುವನ್ನು ಕಟ್ಟಿದ್ದ ಹಗ್ಗ ಕೊಯ್ದು ಹೊರಗೆ ಕರೆತರುವಲ್ಲಿ ಯಶಸ್ವಿಯಾದರು. ಎಚ್ಚರಿಕೆಯಿಂದ ಕೊಟ್ಟಿಗೆಯ ಬಾಗಿಲು ತೆಗೆದು ಮಹೇಶ್ ಹಾಗೂ ಗ್ರಾಮಸ್ಥರು ಹಸುಗಳನ್ನು ಹೊರಗೆ ಎಳೆದು ತಂದರು. ಚಿರತೆ ಮಾತ್ರ ಮಿಸುಕಾಡದೆ ಇದ್ದ ಕಡೆಯಲ್ಲೇ ಅಡಗಿ ಕುಳಿತಿತ್ತು.

ಈ ವೇಳೆ ಚಿರತೆ ಸೆರೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಪಶು ವೈದ್ಯರು ಹರಸಾಹಸ ಪಡಬೇಕಾಯಿತು. ಆ ವೇಳೆಗಾಗಲೇ ಮನೆಯ ಸುತಲೂ ನೂರಾರು ಮಂದಿ ಜಮಾಯಿಸಿದ್ದರು.
ಚಿರತೆ ಸೆರೆ ಹಿಡಿಯಲು ವಿಳಂಬ ಮಾಡುತ್ತಿರುವುದಕ್ಕೆ ಸಿಟ್ಟಾದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಡೆಗೂ ವೈದ್ಯರು ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದರು. ಆದರೂ ಗಟ್ಟಿ ಚಿರತೆ ಇಂಜೆಕ್ಷನ್ ನೀಡಿ ಹದಿನೈದು ನಿಮಿಷ ಕಳೆದರೂ ಪ್ರಜ್ಞೆ ತಪ್ಪಲಿಲ್ಲ. ಆಗ ಮತ್ತೊಂದು ಡೋಸ್ ನೀಡಲು ಪಶುವೈದ್ಯರು ಮುಂದಾದರು.
ಬಲಿಷ್ಠ ಚಿರತೆಯ ಪ್ರಜ್ಞೆ ತಪ್ಪಿಸಲು ಒಂದು ಡೋಸ್ ಸಾಕಾಗದ ಕಾರಣ ೨ನೇ ಡೋಸ್ ನೀಡಿದರು. ಅದಾದ ಕೆಲ ಹೊತ್ತಿನಲ್ಲೇ ಚಿರತೆ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಸುಮಾರು ೪ ಗಂಟೆಗಳ ಕಾರ್ಯಾಚರಣೆ ನಂತರ ಅದನ್ನು ಸೆರೆ ಹಿಡಿಯಲಾಯಿತು. ಇದರಿಂದ ಆತಂಕಗೊಂಡಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಹೇಳಿಕೆ
ಜಮೀನು ಬಳಿ ಹೋಗಿದ್ದಾಗ ಚಿರತೆ ಕಣ್ಣಿಗೆ ಬಿತ್ತು ಹಾಗೇಯೆ ಮಾಯವಾಯಿತು. ಎಲ್ಲಿ ಹೋಯಿತು ಎಂದು ಹುಡುಕಾಡುತ್ತಿದ್ದಾಗ ಆ ವೇಳೆಗಾಗಲೇ ತೆಂಗಿನ ಮರ ಏರಿದ್ದ ಅದು ಏಕಾಏಕಿ ನನ್ನ ಮೇಲರಗಿತು. ಕಾಲಿಗೆ ಬಾಯಿ ಹಾಕಿತು. ಶೂ ಇದ್ದುದರಿಂದ ಗಾಯ ಆಗಲಿಲ್ಲ. ನಂತರ ಅಲ್ಲೇ ಇದ್ದವರಿಗೆ ಹಗ್ಗ ತರುವಂತೆ ಹೇಳಿ ಅದನ್ನು ಹಿಡಿದು ಕೈಲಾಲು ಕಟ್ಟಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿದ್ದೇವೆ.
-ಮುತ್ತು, ಚಿರತೆ ಹಿಡಿದ ಯುವಕ

Instagram video-ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್

Free bus – ಬಸ್ ಹೋದರೆ ಮತ್ತೆ ಬರುತ್ತೆ ಜೀವ ಹೋದರೆ ಏನ ಮಾಡ್ತೀರಿ…?

Arun Putthila : ಮನೆ ಮೇಲೆ ಬಿದ್ದ ಪಿಕಪ್ ವಾಹನ: ಪುತ್ತಿಲರಿಂದ ಪರಿಹಾರದ  ಭರವಸೆ

- Advertisement -

Latest Posts

Don't Miss