ಕರ್ನಾಟಕ ಟಿವಿ ಹಾವೇರಿ : ಹಾವೇರಿ ಜಿಲ್ಲೆ ರಾಜ್ಯದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ್ದು,ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಕೃಷಿಸಚಿವರೂ ಆಗಿರುವ ಬಿ.ಸಿ. ಪಾಟೀಲ್ ಅವರ ನೇತೃತ್ವದಲ್ಲಿ ಕ್ಷೇತ್ರ ಹಾಗೂ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರೇಕೆರೂರಿನಲ್ಲಿ ನಡೆದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕೆರೆ ನೀರು ತುಂಬಿಸುವುದು ಪೂರ್ಣಗೊಳಿಸುವುದರಿಂದ ರೈತರ ನೆಮ್ಮದಿಯ ಜೀವನಕ್ಕೆ ದಾರಿಯಾಗುತ್ತದೆ.ಅವುಗಳನ್ನು ಪೂರ್ಣ ಮಾಡುವುದಕ್ಕೆ ಗಮನ ಕೊಡುತ್ತೇವೆ.ಬಜೆಟ್ ನಲ್ಲಿ ಹಾವೇರಿ ಜಿಲ್ಲೆಗೆ ಆಯುಷ್ ಆಸ್ಪತ್ರೆ, ಜವಳಿ ಪಾರ್ಕ್,ಸಂತ ಶರೀಫ್ ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹಣಕಾಸಿನ ಇತಿಮಿತಿಯಲ್ಲಿ ಐದು ಸಾವಿರ ಕೋಟಿ ಅನುದಾನ ಏತನೀರಾವರಿಗೆ ತೆಗೆದಿಡಲಾಗಿದೆ.ಆ ಮೂಲಕ ದೊಡ್ಡ ಹೆಜ್ಜೆ ಇಟ್ಟಿದ್ದು ಯೋಜನೆ ಪೂರ್ಣ ಮಾಡಲು ಮುಂದೆ ಹೊರಟ್ಟಿದ್ದೇವೆ.ನಮ್ಮ ರೈತರ ಹೊಲಕ್ಕೆ ನೀರು ಕೊಟ್ಟಾಗ, ವೈಜ್ಞಾನಿಕ ಬೆಲೆ ನೀಡಿದಾಗ ರೈತರು ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯ.
ಅನ್ನದಾತ ನೆಮ್ಮದಿಯಿಂದ ಬದಕಬೇಕು ಎಂಬುದು ನಮ್ಮ ಸಂಕಲ್ಪವಾಗಿದ್ದು,ಆ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಸಾಲ ಮನ್ನಾ ಅರ್ಹತಾ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದು, ರೈತರು ದಾಖಲೆಸಹಿತ ತಂದುಕೊಟ್ಟಲ್ಲಿ ಅದು ಸಂಪೂರ್ಣಸರಿಯಾಗಿದ್ದಲ್ಲಿ ಅವರ ಸಾಲಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಉಪಸ್ಥಿತರಿದ್ದರು.