ಕರ್ನಾಟಕ ಟಿವಿ : ಪಕ್ಷದ ಹೈಕಮಾಂಡ್ ನನ್ನನ್ನು ಅಧ್ಯಕ್ಷರನ್ನಾಗಿ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದು ನಮಗೆ ಕೊಟ್ಟಿರುವ ಅಧಿಕಾರ ಅಲ್ಲ, ಜವಾಬ್ದಾರಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮೂವರು ಕಾರ್ಯಾಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ಶಿವಕುಮಾರ್ ನಂತರ ಮಾಧ್ಯಮಗಳ ಜತೆ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಸಲಿಂ ಅಹಮದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…
ನನ್ನ ಮೇಲೆ ವಿಶ್ವಾಸ ಇಟ್ಟು, ಮೂವರು ಕಾರ್ಯಾಧ್ಯಕ್ಷರನ್ನ ನೇಮಕ ಮಾಡಿದ್ದಾರೆ. ಹೊಸ ತಂಡವನ್ನು ಎಐಸಿಸಿ ಕೊಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ನಮಗೆ ಕೊಟ್ಟಿರೋದು ಅಧಿಕಾರ ಅಲ್ಲ, ಅದು ಜವಾಬ್ದಾರಿ. ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡಲು ನಮಗೆ ಅವಕಾಶ ಕೊಟ್ಟಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ಬರುವ ರೀತಿ ಕೆಲಸ ಮಾಡಬೇಕಿದೆ. ತಳಮಟ್ಟದಿಂದ ಪಕ್ಷ ಕಟ್ಟಲು ನಾವು ತೀರ್ಮಾನ ಮಾಡಿದ್ದೇವೆ. ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಮುಂದೆ ಹೋಗುತ್ತೇವೆ.
ಕಾರ್ಯಕರ್ತರು ಹಾಗು ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ದೇಶದ ಎಲ್ಲ ಕಡೆ ಬಿಜೆಪಿಗೆ ಅಧಿಕಾರ ಕೊಟ್ಟಿದ್ರೂ ಅವರಿಗೆ ಅದು ಸಾಲುತ್ತಿಲ್ಲ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯುತ್ತಿದೆ.
ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಕ್ವಾಂಟಿಟಿ ಬೇಕಿಲ್ಲ, ಕ್ವಾಲಿಟಿ ಬೇಕಿದೆ. ಶಿಸ್ತು ಪಾಲನೆಗೆ ಮೊದಲ ಆದ್ಯತೆ. ಪಕ್ಷಕ್ಕೆ ನಿಷ್ಠೆ ತೋರುವವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು.
ವಿಧಾನಸಭೆ ಕಲಾಪ ಹಾಗು ಸಂಸತ್ ಅಧಿವೇಶನ ಮುಗಿದ ನಂತರ ಮೂವರು ಕಾರ್ಯಾಧ್ಯಕ್ಷರ ಜೊತೆ ಪಕ್ಷದ ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗುತ್ತೇವೆ. ದೆಹಲಿಗೆ ಹೋಗಿ ಸೋನಿಯಾ ಗಾಂಧಿಜೀ ,ರಾಹುಲ್ ಗಾಂಧಿ ಹಾಗು ಇತರೆ ಮುಖಂಡರನ್ನ ಭೇಟಿ ಮಾಡುತ್ತೇವೆ ಅಂತ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.