Thursday, November 27, 2025

Latest Posts

ಧಾರವಾಡ ಪರಿಣಾಮಕಾರಿ ಲಾಕ್‍ಡೌನ್‍ಗೆ ಜಿಲ್ಲಾಧಿಕಾರಿ ಸೂಚನೆ

- Advertisement -

ಮಾ.23: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಒಂದು ದೃಢಪಟ್ಟಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳನ್ನು ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಿಸಲು ಸರ್ಕಾರ ನಿರ್ದೇಶನ ನೀಡಿದೆ. ನಿಯಮಾನುಸಾರ ಪರಿಣಾಮಕಾರಿ ಲಾಕ್‍ಡೌನ್ ಮಾಡಲು ಕಂದಾಯ, ಪೊಲೀಸ್, ಆರೋಗ್ಯ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಕ್ಷಣದಿಂದಲೇ ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಕಾರ್ಯಪಡೆಯ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಎಲ್ಲಾ ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಅಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಕಾರ್ಯ ಹಾಗೂ ಸ್ವಯಂ ಘೋಷಣಾ ಪ್ರಮಾಣ ಪತ್ರ ಪಡೆಯಬೇಕು. ಪೊಲೀಸರು ವಾಹನ ತಪಾಸಣೆ ಮತ್ತು ಪ್ರಯಾಣಿಕರ ಪ್ರವಾಸ ಹಿನ್ನೆಲೆ ವಿವರ ಸಂಗ್ರಹಿಸಬೇಕು. ತಲಾ 12 ತಾಸುಗಳ ಸರದಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಿದರು.


ವಿದೇಶಗಳಿಂದ ಬಂದಿರುವ ವ್ಯಕ್ತಿಗಳು ಹೊರಗೆ ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಮಾಹಿತಿಗಳು ಬರುತ್ತಿವೆ. ಆದರೆ ಅವುಗಳಲ್ಲಿ ಬಹುತೇಕ ಖಚಿತತೆ ಇರುವುದಿಲ್ಲ. ಇವುಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸರ್ಕಾರದ ಶಿಷ್ಟಾಚಾರವನ್ನು ಪಾಲಿಸಲು ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಇರುವವರಿಗೆ ಕಟ್ಟುನಿಟ್ಟಾಗಿ ತಿಳಿಸಲು ತಂಡಗಳನ್ನು ರಚಿಸಬೇಕು. ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.


ಸೋಂಕು ದೃಢಪಟ್ಟಿರುವ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿರುವ ಬೀಟ್ ಪೊಲೀಸರು ಹೆಚ್ಚು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಅತಿಹೆಚ್ಚು ಅಪಾಯಕ್ಕೊಳಗಾಗಬಹುದಾದ ಸಾಧ್ಯತೆಗಳಿರುವ ಪ್ರದೇಶದಲ್ಲಿನ ವಿಚಕ್ಷಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದರು.


ಅಗತ್ಯ ಸೇವೆಗಳನ್ನು ಹೊರತು ಪಡಿಸಿ ವ್ಯಾಪಾರ ವಹಿವಾಟುಗಳನ್ನು ನಿರ್ದಾಕ್ಷಿಣ್ಯವಾಗಿ ಸ್ಥಗಿತಗೊಳಿಸಬೇಕು. ಹವಾ ನಿಯಂತ್ರಿತ ಸೌಕರ್ಯಗಳಿರುವ ಬಟ್ಟೆ, ಚಿನ್ನಾಭರಣ ಮತ್ತಿತರ ವಾಣಿಜ್ಯ ಮಳಿಗೆಗಳ ವಹಿವಾಟು ಯಾವುದೇ ಕಾರಣಕ್ಕೂ ನಡೆಯಬಾರದು.
ಸರ್ಕಾರಿ ಕಚೇರಿಗಳಲ್ಲಿ 60 ವರ್ಷ ಮೀರಿದ ನಿವೃತ್ತರು ಗುತ್ತಿಗೆ ಆಧಾರದಲ್ಲಿ ಸೇವೆಸಲ್ಲಿಸುತ್ತಿದ್ದರೆ ಅವರು ಕರ್ತವ್ಯಕ್ಕೆ ಹಾಜರಾಗದಿರಲು ತಿಳಿಸಬೇಕು. ಸಾಮಾಜಿಕ ಅಂತರ, ಸ್ವಚ್ಚತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.


ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ ಚವ್ಹಾಣ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

Latest Posts

Don't Miss