ನವದೆಹಲಿ : ದಿನಕ್ಕೊಂದು ಷರತ್ತು ಹಾಕುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಿರೋಧ ಪಕ್ಷಗಳಿಗೆ ಅಧಿವೇಶನ ನಡೆಯೋದು, ಜನ ಪರ ವಿಚಾರಗಳು ಚರ್ಚೆಯಾಗೋದೇ ಬೇಕಾಗಿಲ್ಲ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಣಿಪುರ ವಿಚಾರದ ಕುರಿತ ಚರ್ಚೆಗೆ ನಾವು ಸಿದ್ದರಿದ್ದೇವೆ. ಇದನ್ನ ಅಧಿವೇಶನದಲ್ಲಿ ನಿನ್ನೆಯೂ ನಾವು ಹೇಳಿದ್ದೆವು, ಆದರೆ ವಿರೋಧ ಪಕ್ಷಗಳು ಪುನಃ ಪುನಃ ಹೊಸ ಷರತ್ತುಗಳನ್ನು ಮುಂದಿಟ್ಟುಕೊಂಡು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಅರ್ಥಪೂರ್ಣ ಚರ್ಚೆಗೆ ಸಿದ್ಧವಾಗಿದೆ, ಆದರೆ ವಿರೋಧ ಪಕ್ಷಗಳು ಸುಖಾಸುಮ್ಮನೆ ಸುಳ್ಳು ಹೇಳುತ್ತಾ ಅಧಿವೇಶನವನ್ನು ಹಾಳು ಮಾಡುವುದನ್ನು ಬಿಟ್ಟು ಸಹಕರಿಸಬೇಕು ಎಂದರು.
ಇದೆ ವೇಳೆ “ಉಳಿದೆಲ್ಲ ಕಲಾಪಗಳನ್ನು ಬದಿಗೊತ್ತಬೇಕು, ಮಣಿಪುರದ ಕುರಿತು ಉಳಿದೆಲ್ಲ ವಿಚಾರ ಕೈಬಿಟ್ಟು ಚರ್ಚೆ ಮಾಡಬೇಕು..” ಅಂತ ವಿರೋಧ ಪಕ್ಷಗಳ ಪ್ರಮುಖರು ನೋಟೀಸ್ ನೀಡಿರುವ ಬಗ್ಗೆ ಮಾದ್ಯಮದವರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ ಜೋಶಿ, ಆ ರೀತಿ ನೋಟೀಸ್ ನೀಡಲು ಸದನದ ನಿಯಮಾವಳಿಗಳಲ್ಲಿ ಅವಕಾಶವೇ ಇಲ್ಲ, ಇಂತಹ ಸರಳ ವಿಚಾರವನ್ನು ವಿಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಇಲ್ಲದ ನಿಯಮಗಳಡಿಯಲ್ಲಿ ನೋಟೀಸ್ ನೀಡುತ್ತಾ ಕಾಲಾಹರಣ ಮಾಡಬಾರದು ಎಂದರು.
ಈ ಬಾರಿಯ ಅಧಿವೇಶನಲ್ಲಿ ಹಲವು ಪ್ರಮುಖ ವಿಧೇಯಕಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಜನ ಪರ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರು ಕಲಾಪಕ್ಕೆ ಅಡ್ಡಿಪಡಿಸುವುದನ್ನು ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಲಿ, ಮಣಿಪುರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
CT Ravi: ಸಭಾಧ್ಯಕ್ಷರ ಏಕಪಕ್ಷೀಯ ವರ್ತನೆ ಕುರಿತು ಗವರ್ನರ್ ರಿಗೆ ವಿವರ