Monday, December 23, 2024

Latest Posts

Reservation: ಹಿಂದುಳಿದ ಸಮುದಾಯದವರಿಗೆ ಚುನಾವಣೆಗಳಲ್ಲಿ ಮೀಸಲಾತಿ ದೊರೆಯಬೇಕು..!

- Advertisement -

ಬೆಂಗಳೂರು:ಮೀಸಲಾತಿ ಜಾರಿಯಾದ ಈ 100 ವರ್ಷಗಳ ನಂತರವೂ ಮೀಸಲಾತಿ ಸಂಬಂಧಪಟ್ಟಂತೆ ಅನೇಕ ಸಮಸ್ಯೆ ಮತ್ತು ಸವಾಲುಗಳಿವೆ. ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕಿಗಾಗಿ ಆಂದೋಲನ ನಡೆಸುವ ಸ್ಥಿತಿ ಎದುರಾಗಿದೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಹೆಚ್.‌ಎಸ್ ನಾಗಮೋಹನ್‌ ದಾಸ್‌ ಹೇಳಿದರು

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜೊತೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲೂ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ದೊರೆಯಬೇಕು- ನಿವೃತ್ತ ಜಸ್ಟೀಸ್‌ ನಾಗಮೋಹನ್‌ ದಾಸ್‌:

• ಈ ದೇಶದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತಗೊಂಡ 4635 ಉಪಜಾತಿಗಳು
• ಸರ್ಕಾರ ಜಸ್ಟೀಸ್‌ ಭಕ್ತವತ್ಸಲ ಹಾಗೂ ಕಾಂತರಾಜು ವರದಿಯನ್ನು ಸ್ವೀಕರಿಸಿ ಪರಿಗಣಿಸಲೇಬೇಕು
-ಹೆಚ್.ಎಸ್‌ ನಾಗಮೋಹನ್‌ ದಾಸ್‌

• ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡಲು ಅಂಕಿ-ಅಂಶಗಳ ಕೊರತೆ ಎನ್ನುವ ನೆಪ ಹೇಳುವಂತಿಲ್ಲ.
• ಅಶಕ್ತ ಸಮುದಾಯಗಳಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನಾಮನಿರ್ದೇಶನ ಸದಸ್ಯತ್ವ ನೀಡಬೇಕು
-ಕಾಂತರಾಜು

• 170 ಕೋಟಿ ವ್ಯಯಿಸಿ ತಯಾರಿಸಿದ ಕಾಂತರಾಜು ವರದಿ ನೆನಗುದಿಗೆ ಬಿದ್ದಿದೆ.
• 197 ಅತಿ ಹಿಂದುಳಿದ ವರ್ಗಗಳಿಗೆ ಪ್ರವರ್ಗ 1ಎ ಕೊಟ್ಟಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.
ಎಂ.ಸಿ ವೇಣುಗೋಪಾಲ್‌

. ನಗರದ ಗಾಂಧಿ ಭವನದಲ್ಲಿ ಅತಿ ಹಿಂದುಳಿದ ಸಮುದಾಯಗಳ ಜಾಗೃತಿ ವೇದಿಕೆ ಆಯೋಜಿಸಿದ್ದ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಓಬಿಸಿ ಮೀಸಲಾತಿಯ ಇಕ್ಕಟ್ಟು ಬಿಕ್ಕಟ್ಟು ಸಂವಾದದಲ್ಲಿ ಅವರು ಮಾತನಾಡುತ್ತಾ, ಈ ದೇಶದಲ್ಲಿ 4635 ಉಪಜಾತಿಗಳು ಪ್ರತಿಯೊಂದು ಉಪಜಾತಿಗಳಿಗೂ ಪ್ರತ್ಯೇಕ ಉಪಕಸುಬುಗಳಿವೆ. ಬಹುತೇಕ ಉಪಜಾತಿಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ ಎಂದರು.

12 ವರ್ಷಗಳ ಹಿಂದೆಯೇ ಸರ್ವೋಚ್ಛ ನ್ಯಾಯಾಲಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆಯೋಗ ರಚನೆ, ವಿಸ್ಕೃತ ಅಂಕಿ ಅಂಶಗಳ ಸಹಿತ ವರದಿ ಪಡೆಯುವುದು, ಪ್ರತ್ಯೇಕವಾರು ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವುದು, ಒಟ್ಟು ಸ್ಥಾನಗಳ ಸಂಖ್ಯೆ ಶೇ.೫೦ ಮೀರದಂತೆ ಮೀಸಲಾತಿ ನಿಗದಿಪಡಿಸಬೇಕು ಎಂಬ ಮಾನದಂಡಗಳನ್ನು ವಿಧಿಸಿತ್ತು. ಆದರೆ ನಮ್ಮ ಯಾವುದೇ ಸರ್ಕಾರಗಳೂ ಇದನ್ನು ಜಾರಿಗೊಳಿಸಿಲ್ಲ. 2020ರಲ್ಲಿ ಓಬಿಸಿ ಮೀಸಲಾತಿ ಬಿಟ್ಟು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹೊರಟ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಅದು ಮಹಾರಾಷ್ಟ್ರಕ್ಕೆ ಮಾತ್ರ ಮೀಸಲಾಗಿದ್ದ ಸರ್ವೋಚ್ಛ ನ್ಯಾಯಾಲಯದ ನಿಲುವಲ್ಲ, ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಮತ್ತೆ ಸುಪ್ರೀಂ ಕೋರ್ಟ್‌ ಪುನರುಚ್ಛರಿಸಿತ್ತು ಎಂದರು.

ಜಸ್ಟೀಸ್‌ ಭಕ್ತವತ್ಸಲ ವರದಿಯನ್ನು ಸರ್ಕಾರ ಸ್ವೀಕರಿಸಲೂ ಇಲ್ಲ ತಿರಸ್ಕರಿಸಲೂ ಇಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಅತಿ ಹಿಂದುಳಿದ ಸಮುದಾಯಗಳ ಹಿತಾಸಕ್ತಿಯ ಉದ್ದೇಶದಿಂದ ಸರ್ಕಾರ ಈ ವರದಿಯನ್ನು ಕೂಡಲೇ ಸ್ವೀಕರಿಸಿ ಪರಿಗಣಿಸಬೇಕು. 2011ರಲ್ಲಿ ನಡೆಸಲಾದ ಜನಗಣತಿಯಲ್ಲಿ ಪ.ಜಾತಿ ಹಾಗೂ ಪ.ಪಂಗಡಗಳ ಜನಗಣತಿ ಮತ್ತು ಜಾತಿಗಣತಿ ಇದೆ. ಆದರೆ ಒಬಿಸಿ ಸಮುದಾಯಗಳಿಗೆ ಕೇವಲ ಜನಗಣತಿ ಮಾತ್ರವಿದೆ ಆದರೆ ಜಾತಿ ಗಣತಿ ಇಲ್ಲ. ಕಾಲಕಾಲಕ್ಕೆ ಚುನಾವಣೆ ನಡೆಸಬೇಕಿರುವ ನಿಯಮದಂತೆ ಕಳೆದ 2 ವರ್ಷಗಳಿಂದ ಚುನಾವಣೆ ನಡೆಯದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕು ಹಾಗೂ ಜಸ್ಟೀಸ್‌ ಭಕ್ತವತ್ಸಲ ವರದಿಯನ್ನು ಪರಿಗಣಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ನೀಡಬೇಕು. ಜಸ್ಟೀಸ್‌ ಭಕ್ತವತ್ಸಲ ವರದಿ ವೈಜ್ಞಾನಿಕವಾಗಿ ಸೂಕ್ತವಲ್ಲದಿದ್ದರೇ ಕಾಂತರಾಜು ವರದಿಯನ್ನು ಪುರಸ್ಕರಿಸಬೇಕು ಎಂದು ನಾಗಮೋಹನ್‌ ದಾಸ್‌ ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶ ಕಾಂತರಾಜು ಅವರು ಮಾತನಾಡಿ, ಚುನಾವಣೆ ಮತ್ತು ಮೀಸಲಾತಿ ಎರಡೂ ಸಂವಿಧಾನದ ಮೂಲತತ್ವ. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದರು. ಸ್ವಾತಂತ್ರ್ಯ ಬಂದ ದಶಕಗಳ ಬಳಿಕ ಮಂಡಲ್‌ ಆಯೋಗ ಜಾರಿಯಾದ ನಂತರ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿತ್ತು. 2008ರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಸಿಕ್ಕಿತು. ಆದರೆ ಚುನಾವಣೆಗಳಲ್ಲಿ ಮೀಸಲಾತಿ ವ್ಯವಸ್ಥೆ ಇನ್ನೂ ಪರಿಪೂರ್ಣವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಜೊತೆ ವಿಧಾನಸಭಾ, ವಿಧಾನಪರಿಷತ್‌ ಹಾಗೂ ಲೋಕಸಭಾ ಚುನಾವಣೆಗಳಲ್ಲಿಯೂ ಹಿಂದುಳಿದ ಸಮುದಾಯಗಳು ಹಾಗೂ ಅತಿ ಹಿಂದುಳಿದ ಸಮಾಜಗಳಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಒಬಿಸಿ ಮೀಸಲಾತಿ ನೀಡಲು ಅಂಕಿ ಅಂಶಗಳ ಕೊರತೆ ಎಂಬ ಸಬೂಬು ಹೇಳುವಂತಿಲ್ಲ. ಅಶಕ್ತ ಸಮುದಾಯಗಳಿಗೆ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ನಾಮನಿರ್ದೇಶಿತ ಸದಸ್ಯತ್ವ ನೀಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್‌ ಮಾತನಾಡಿ, 170 ಕೋಟಿ ವ್ಯಯಿಸಿ ತಯಾರಿಸಿದ ಕಾಂತರಾಜು ವರದಿ ನೆನಗುದಿಗೆ ಬಿದ್ದಿದೆ. 2018ರಿಂದ ನೆನಗುದಿಗೆ ಬಿದ್ದಿರುವ ಕಾಂತರಾಜು ಸಮಿತಿಯ ವರದಿಯನ್ನು ಸ್ವೀಕರಿಸಬೇಕು ಸಾರ್ವಜನಿಕವಾಗಿ ವರದಿಯನ್ನು ಬಹಿರಂಗಪಡಿಸಬೇಕು. ವಿಧಾನಸಭೆ, ವಿಧಾನಪರಿಷತ್‌ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ಖಚಿತಪಡಿಸಿ ಅತಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. 197 ಜಾತಿಗಳು ಅತಿ ಹಿಂದುಳಿದ ವರ್ಗಗಳಿಗೆ ಪ್ರವರ್ಗ 1ಎ ಕೊಟ್ಟಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಪ್ರಬಲ ಜಾತಿಗಳ ಎದುರು ಪೈಪೋಟಿ ಮಾಡುವ ಶಕ್ತಿ ಇಲ್ಲ. ಸಂವಿಧಾನದ ರಕ್ಷಣೆಯಲ್ಲಿ ಮೀಸಲಾತಿಯ ಸೌಕರ್ಯ ದೊರಕಿದಾಗ ಮಾತ್ರ ಅಂತಹ ಸಾಮರ್ಥ್ಯ ದೊರೆಯುತ್ತದೆ ಎಂದರು.

ಈ ಸಂವಾದದಲ್ಲಿ ಸವಿತಾ ಸಮಾಜ, ರಾಜೂ ಕ್ಷತ್ರಿಯ, ತಿಗಳರು, ಈಡಿಗ, ಕುಂಬಾರ, ಕುರುಬ, ಉಪ್ಪಾರ, ಅಲೆಮಾರಿ, ಯಾದವ, ಮಡಿವಾಳ, ಕಾಡುಗೊಲ್ಲ, ತೆಲುಗು ಶೆಟ್ಟಿ, ರಜಪೂತ, ಬಿಲ್ಲವ ಮುಂತಾದ 16 ಕ್ಕೂ ಅಧಿಕ ಸಮಾಜಗಳ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣ, ನೆ.ಲ ನರೇಂದ್ರ ಬಾಬು, ಮಾಜಿ ಮೇಯರ್‌ ವೆಂಕಟೇಶ ಮೂರ್ತಿ, ಹುಚ್ಚಪ್ಪ, ತುಮಕೂರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ಗೌಡ, ಹಿರಿಯ ಪತ್ರಕರ್ತರಾದ ಲಕ್ಷ್ಮಣ್‌ ಕೊಡಸೆ, ಜಾಗೃತ ವೇದಿಕೆ ಉಪಾಧ್ಯಕ್ಷರಾದ ಲಿಂಗಪ್ಪ, ಶಿವು ಯಾದವ್‌, ಅನಂತ್‌ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

Cemetery: ದಲಿತ ವ್ಯಕ್ತಿ ಶವ ಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದೆ ಮನೆ ಮುಂದೆಯೇ ಹೂಳಲು ಮುಂದಾದರು

Road widening: ಅಪಾಯಕಾರಿ ತಿರುವು ರಸ್ತೆಗೆ ಬೇಕಾಗಿದೆ ಮುಕ್ತಿ

Gruhalaxmi: ಕನಕಪುರದ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಡಿಸಿಎಂ ದಿಢೀರ್ ಭೇಟಿ: ಗೃಹಲಕ್ಷಿ ನೋಂದಣಿ ಪ್ರಕ್ರಿಯೆ ಪರಿಶೀಲನೆ

- Advertisement -

Latest Posts

Don't Miss