Special Story : ಅಲ್ಲೊಂದು ಪವಿತ್ರ ದೇವಸ್ಥಾನ ಆದ್ರೆ ಅಲ್ಲಿ ಪುರುಷರಿಗೆ ಮಾತ್ರ ಪ್ರವೇಶ ನಿಷಿಧ್ದ. ಆದ್ರೂ ಪುರುಷರು ಹೆಂಗಳೆಯರ ವೇಷದಲ್ಲಿ ಆ ಒಂದು ಉತ್ಸವಕ್ಕೆ ಕ್ಕೆ ಪ್ರವೇಶ ಮಾಡಬಹುದಂತೆ ಇದು ಆ ದೇಗುಲದ ಸಂಪ್ರದಾಯವಂತೆ. ಹಾಗಿದ್ರೆ ಈ ಆಚಾರದ ದೇವಾಲಯ ಎಲ್ಲಿದೆ..?! ಏನಿದರ ಹಿನ್ನೆಲೆ ಹೇಳ್ತೀವಿ ಈ ಸ್ಟೋರಿಯಲ್ಲಿ…..
ದೇಗುಲ ಅದೊಂದು ನಿಶ್ಚಿಂತೆಯ ಪ್ರಶಾಂತ ಮಂದಿರ ಆ ದೇಗುಲದ ಹಿನ್ನೆಲೆಗೆ ತಕ್ಕಂತೆ ಅಲ್ಲಿನ ಆಚಾರ ವಿಚಾರ..ಒಟ್ಟಾರೆ ದೇವಸ್ಥಾನ ಅಂದ್ರೆ ಸ್ವರ್ಗಕ್ಕೆ ಸಮ ಎನ್ನುತ್ತಾರೆ ಆಸ್ತಕರು. ಆದರೆ ಇಲ್ಲೊಂದು ದೇವಾಲಯ ತನ್ನ ವಿಭಿನ್ನ ಆಚಾರದಿಂದಲೇ ಭಕ್ತರನ್ನು ಸೆಳೆಯುತ್ತಿದೆ.
ಸಾಮಾನ್ಯವಾಗಿ ದೇಗುದಲ್ಲಿ ಮಡಿ ಮೈಲಿಗೆ ವಿಚಾರದಲ್ಲಿ ಪ್ರವೇಶವನ್ನು ನಿಷೇಧ ಮಾಡಿರೋದನ್ನು ನಾವು ನೋಡಿರಬಹುದು ಆದ್ರೆ ಈ ದೇಗುಲದಲ್ಲಿ ಮಾತ್ರ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಈ ದೇವಾಲಯದಲ್ಲಿ ಪೂಜೆ ಮಾಡಲು ಸ್ತ್ರೀಯರಿಗೆ ಮತ್ತು ಮಂಗಳಮುಖಿಯರಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಪುರುಷರು ಈ ದೇವಾಲಯದಲ್ಲಿ ಪೂಜೆ ಮಾಡಬೇಕಾದರೆ, ಮಹಿಳೆಯರಂತೆ ಅಲಂಕಾರವನ್ನು ಮಾಡಿಕೊಂಡು ಬರಬೇಕೆನ್ನುವ ನಿಯಮವಿದೆ.
ಅಷ್ಟಕ್ಕೂ ಈ ದೇಗುಲ ಎಲ್ಲಿರೋದು ಗೊತ್ತಾ..?! ಅದೂ ಹೇಳ್ತೀವಿ ನೋಡಿ….. ಈ ದೇಗುಲ ಪ್ರಸ್ತುತ ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ. ಕೊಟ್ಟಂಕುಳಂಗರ ದೇವಿ ದೇವಸ್ಥಾನ ಇದಾಗಿದ್ದು ಇಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಅಂದರೆ ಕರುನಾಡಿನ ಹಲವೆಡೆ ಲಕ್ಷದೀಪ ಉತ್ಸವದಂತೆ ಇದು ನಡೆಯೋ ಉತ್ಸವ.
ಈ ಉತ್ಸವಕ್ಕೆ ಪ್ರತಿ ವರ್ಷ ಸಾವಿರಾರು ಪುರುಷ ಭಕ್ತರು ಆಗಮಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪುರುಷರು ಪುರುಷರಂತೆ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ದೇವಾಲಯದಲ್ಲಿ ಅವರಿಗಾಗಿ ಪ್ರತ್ಯೇಕ ಮೇಕಪ್ ರೂಂನ್ನು ಆಯೋಜಿಸಲಾಗುತ್ತದೆ. ಅಲ್ಲಿ ಪುರುಷರು ಮಹಿಳೆಯರಂತೆ ಸೀರೆ ಮತ್ತು ಆಭರಣಗಳನ್ನು ಧರಿಸುತ್ತಾರೆ. ಮೇಕಪ್ ಮಾಡುವುದರ ಜೊತೆಗೆ ಕೇಶಾಲಂಕಾರವನ್ನು ಕೂಡ ಮಹಿಳೆಯರಂತೆ ಮಾಡಿಕೊಳ್ಳ ಬೇಕಾಗುತ್ತದೆ. ಈ ಉತ್ಸವದಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಇತಿ – ಮಿತಿಗಳಿಲ್ಲ. ಎಲ್ಲಾ ವಯಸ್ಸಿನ ಪುರುಷರು ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದು.
ಈ ದೇಗುಲದ ಇನ್ನೊಂದು ವಿಶೇಷವೇ ಛಾವಣಿಯೇ ಇಲ್ಲದ ದೇವಾಲಯವಿದು. ಈ ದೇವಾಲಯದಲ್ಲಿ ಪುರುಷರು ಮತ್ತು ಮಹಿಳೆಯರಲ್ಲದೆ, ಮಂಗಳಮುಖಿಯರು ಕೂಡ ಪೂಜೆಗೆ ಬರುತ್ತಾರೆ. ಈ ದೇವಾಲಯದಲ್ಲಿ ಸ್ಥಾಪಿಸಲಾದ ದೇವಿಯ ವಿಗ್ರಹವು ಸ್ವಯಂಭು ವಿಗ್ರಹ ಎನ್ನುವ ನಂಬಿಕೆಯಿದೆ. ವಿಶೇಷ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಈ ದೇಗುಲ ಯಾವುದೇ ರೀತಿಯ ಛಾವಣಿಯನ್ನು ಹೊಂದಿಲ್ಲ. ಗರ್ಭಗುಡಿಯ ಮೇಲೆ ಮೇಲ್ಛಾವಣಿ ಅಥವಾ ಕಲಶವಿಲ್ಲದ ರಾಜ್ಯದ ಏಕೈಕ ದೇವಾಲಯ ಇದಾಗಿದೆ ಎಂಬುವುದು ಪ್ರತೀತಿ.
ಈ ದೇಗುಲದ ಇತಿಹಾಸವನ್ನೂ ಒಮ್ಮೆ ನೋಡಿ ಬರೋಣ..ಹಲವು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಕೆಲವು ಕುರುಬರು ಮಹಿಳೆಯರ ಉಡುಪುಗಳನ್ನು ಧರಿಸಿ ಕಲ್ಲಿಗೆ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಿದರೆನ್ನುವ ನಂಬಿಕೆಯಿದೆ. ನಂತರ ಆ ಕಲ್ಲಿನಿಂದ ದೈವಿಕ ಶಕ್ತಿ ಹೊರಹೊಮ್ಮಲು ಪ್ರಾರಂಭಿಸಿತು. ಇದಾದ ನಂತರ ಅದಕ್ಕೆ ದೇವಸ್ಥಾನದ ರೂಪ ನೀಡಲಾಯಿತು. ಅಂದಿನಿಂದ ಇಂದಿನವರೆಗೂ ಇಲ್ಲಿ ಪೂಜೆ – ಪುನಸ್ಕಾರಗಳು ನಡೆಯುತ್ತದೆ. ಇದಲ್ಲದೆ, ಕೆಲವರು ಕಲ್ಲಿನ ಮೇಲೆ ತೆಂಗಿನಕಾಯಿ ಒಡೆಯುತ್ತಿದ್ದರು. ಈ ಸಮಯದಲ್ಲಿ ಕಲ್ಲಿನಿಂದ ರಕ್ತ ಬರಲಾರಂಭಿಸಿತು. ಇದರ ನಂತರ ಇಲ್ಲಿ ದೇವಿಯನ್ನು ಪೂಜಿಸಿಕೊಂಡು ಬರುವ ಸಂಪ್ರದಾಯ ಆರಂಭವಾಯಿತು ಎಂದು ಐತಿಹ್ಯದ ಪುಟ ಹೇಳುತ್ತದೆ.
ಈ ಕೊಟ್ಟಂಕುಳಂಗರ ದೇವಿ ದೇವಸ್ಥಾನವು ಕೇರಳದ ಪ್ರಮುಖ ದೇವಾಲಯಗಳಲ್ಲಿ ಒಂದು. ಇಲ್ಲಿ ದೇವಿಯು ಕಲ್ಲು ಉದ್ಭವವಾದಾಗ ಕುರುಬರು ಮಹಿಳೆಯರ ಉಡುಪುಗಳನ್ನು ಧರಿಸಿ ಪೂಜೆ ಮಾಡುವುದರಿಂದ ಇಂದಿಗೂ ಇಲ್ಲಿ ಪುರುಷರಿಗೆ ದೇವಾಲಯದ ಒಳಗೆ ಪ್ರವೇಶವನ್ನು ನೀಡುವುದಿಲ್ಲ ಎಂಬುವುದೇ ಇಂದಿಗೂ ನಡೆದು ಬಂದಿರೋ ಸಂಪ್ರದಾಯ.