ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ ₹6-8 ಲಕ್ಷ ಕಮಿಷನ್ ಕೇಳುತ್ತಿರುವ ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ವಜಾಗೊಳಿಸುವಂತೆ ಎಎಪಿ ಆಗ್ರಹಿಸಿದೆ. ಲೋಕಾಯುಕ್ತದಲ್ಲಿ ಸುಮೊಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ, ಕೃಷಿ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳಿಂದ ತಿಂಗಳಿಗೆ ತಲಾ ₹6-8 ಲಕ್ಷ ಕೇಳುತ್ತಿದ್ದಾರೆ ಎಂದರೆ ಅದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಲೆಷ್ಟು ಎಂದು ಜನರು ಕೇಳುವ ಮೊದಲು ಚಲುವರಾಯಸ್ವಾಮಿ ಅವರನ್ನು ತಕ್ಷಣ ವಜಾಗೊಳಿಸಬೇಕು. ಲೋಕಾಯುಕ್ತದಲ್ಲಿ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಚಿವರ ವಿರುದ್ಧ ರಾಜ್ಯಪಾಲರಿಗೆ ಧೈರ್ಯವಾಗಿ ದೂರು ಸಲ್ಲಿಸಿರುವ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಸಿಎಂ ಮತ್ತು ಡಿಸಿಎಂ ಖುದ್ದಾಗಿ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಎಪಿ ದೊಡ್ಡ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್, ಪೇಸಿಎಂ ವಿರುದ್ಧ ಸಿದ್ದರಾಮಯ್ಯ ಅವರು ರಾಜ್ಯದ್ಯಂತ ಹೋರಾಟ ನಡೆಸಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಿದೆ. ಭ್ರಷ್ಟಾಚಾರ, ಕಮಿಷನ್ ದಂಧೆಯ ಅಸ್ತಿತ್ವ ಹಿಂದಿನಂತೆಯೇ ಇದೆ. ಯಾವುದೇ ಬದಲಾವಣೆಯಾಗಿಲ್ಲ. ರೈತರ ಸಂಕಷ್ಟವೇನು ಎಂಬುದು ಗೊತ್ತಿದ್ದುಕೊಂಡು ಕೃಷಿ ಕ್ಷೇತ್ರದಲ್ಲಿ ಮಂತ್ರಿಗಳು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ವಿರುದ್ಧದ ನಿಲುವನ್ನು ಕಾಪಿ ಮಾಡಿ
ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಸರ್ಕಾರಿ ಆಸ್ಪತ್ರೆ, ಶಾಲೆ, ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡು ರಾಜ್ಯದಲ್ಲಿ ಅಳವಡಿಸಿಕೊಂಡಿರುವಂತೆ ಅಲ್ಲಿನ ಭ್ರಷ್ಟಾಚಾರ ವಿರುದ್ಧದ ನಿಲುವನ್ನು ಕಾಪಿ ಮಾಡಿ ಅಳವಡಿಸಿಕೊಳ್ಳಬೇಕು ಎಂದು ಮೋಹನ್ ದಾಸರಿ ಸಲಹೆ ನೀಡಿದರು.
ಈ ವೇಳೆ ಪಕ್ಷದ ಮುಖಂಡರಾದ ಜಗದೀಶ್ ಚಂದ್ರ ಹಾಗೂ ಸಮಾಜಿಕ ಜಾಲತಾಣಗಳ ಮುಖ್ಯಸ್ಥರಾದ ದರ್ಶನ್ ಜೈನ್ ಇದ್ದರು.
ಮಂಡ್ಯ ಜಿಲ್ಲೆಯ 7 ಜನ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಲಾ 6-8 ಲಕ್ಷ ನೀಡುವಂತೆ ಕೃಷಿ ಸಚಿವರು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ ಮತ್ತು ಮದ್ದೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಲ್ಲೇಖಿತ ದೂರರ್ಜಿ ಸಲ್ಲಿಸಿದ್ದಾರೆ.
Rotary Elite: ಹುಬ್ಬಳ್ಳಿ ರೋಟರಿ ಎಲೈಟ್‍ನಿಂದ ವಿಶ್ವ ಸ್ತನಪಾನ ದಿನ ಆಚರಣೆ
Finance support: ಮೃತ ರೈತ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಆರ್ಥಿಕ ನೆರವು..!
BJP Protest: ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ