State News : ಮಾರುಕಟ್ಟೆಯ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ಒಂದಡೆ ಟೊಮೆಟೋ ಬಳಸುವ ಗ್ರಾಹಕರಲ್ಲಿ ಸಂತಸ ಮೂಡಿದರೆ, ಮತ್ತೊಂದಡೆ ಟೊಮೆಟೋ ಬೆಳೆಗಾರರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.
ಜಿಲ್ಲೆಯ ಟೊಮೆಟೋ ಮಾರುಕಟ್ಟೆಗಳಾದ ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿಗಳಲ್ಲಿ ಶುಕ್ರವಾರ 15 ಕೆ.ಜಿ. ಟೊಮೆಟೋ ಬಾಕ್ಸ್ ಕೇವಲ 350 ರಿಂದ 700 ರೂ ವರೆಗೂ ಮಾರಾಟವಾಗಿದ್ದು ಟೊಮೆಟೋ ದರ ಬರೋಬರಿ ಶೇ. 60ರಿಂದ 70ರ ವರೆಗೆ ಬೆಲೆ ಕುಸಿತ ಕಂಡಿದೆ.
ಒಂದರೆಡು ದಿನದಲ್ಲಿ ಬೆಲೆ ಭಾರೀ ಕುಸಿತ ಕಂಡಿದೆ. ವಾರದ ಹಿಂದೆ 1700, 2000 ರೂ. ಅಸುಪಾಸಿನಲ್ಲಿದ್ದ 15 ಕೆ.ಜಿ. ಟೊಮೆಟೋ ಈಗ 700ಕ್ಕೆ ಕುಸಿತ ಕಂಡಿದ್ದು ಇನ್ನಷ್ಟುಬೆಲೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಜೂನ್ ಅಂತ್ಯ, ಜುಲೈ ತಿಂಗಳ ಆರಂಭದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಒಂದರೆಡು ತಿಂಗಳು ಬೆಲೆ ಇಳಿಕೆ ಆಗಲ್ಲ ಎಂದು ಅಂದಾಜು ಮಾಡಲಾಗಿತ್ತು. ಆದರೆ, ದೇಶವ್ಯಾಪ್ತಿ ಟೊಮೆಟೋ ಮಾರುಕಟ್ಟೆಗೆ ಪ್ರವೇಶ ಆರಂಭಗೊಂಡ ಬೆನ್ನಲ್ಲೆ ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ.