ಬೆಂಗಳೂರು:ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯ ಹೂಡಿಕೆಗೆ ಉತ್ತಮ ರಾಜ್ಯ. ಬೆಂಗಳೂರು ದೇಶದ ಇತರೇ ನಗರಗಳಿಗೆ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾನ್ಯತಾ ಟೆಕ್‌ಪಾರ್ಕ್ ಬಳಿ ಹಮ್ಮಿಕೊಂಡಿದ್ದ ಇಂಡಿಯನ್ ಇನ್ನೋವೇಷನ್ ಸಮಿಟ್ ಸಿಐಐ ಇಂಡಿಯಾ ಇನ್ನೋವೇಷನ್ – 2023ಯ 19ನೇ ಆವೃತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
“70 ರ ದಶಕದಿಂದಲೇ ಕರ್ನಾಟಕದಲ್ಲಿ ಉತ್ತಮ ಮಾನವ ಸಂಪನ್ಮೂಲ, ತಾಂತ್ರಿಕ ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಂದ ಇಡೀ ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕವು ಉದ್ಯಮ ಸ್ಥಾಪನೆಗೆ ಸೂಕ್ತ ಸ್ಥಳ, ಇದರಿಂದ ಉದ್ಯಮಗಳಿಗೂ ಲಾಭ, ಸರ್ಕಾರಕ್ಕೂ ಲಾಭವಾಗಲಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರನ್ನು ಒಟ್ಟುಗೂಡಿಸಿ ಮುಂದೆ ಸಾಗುತ್ತಿದ್ದೇವೆ. ಪಕ್ಷಾತೀತವಾಗಿ ಮುಂದುವರಿದು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇವೆ. ಇಡೀ ದೇಶದಲ್ಲೇ ಐಟಿ ರಫ್ತಿನಲ್ಲಿ ಮೊದಲ ಸ್ಥಾನ, ಕೈಗಾರಿಕಾ ಬೆಳವಣಿಗೆ, ಜಿಎಸ್‌ಟಿ ಪಾವತಿ ಸೇರಿದಂತೆ ಅಭಿವೃದ್ದಿಯಲ್ಲಿ ಮುಂದಿದ್ದೇವೆ. ನೀವು ಯಶಸ್ಸು ಸಾಧಿಸಿದರೆ ನಾವು ಯಶಸ್ವಿಯಾಗುತ್ತೇವೆ.
ರಾಜ್ಯದ ಜನ ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ನಮ್ಮ ಸರ್ಕಾರ ಹೂಡಿಕೆದಾರರಿಗೆ ಉತ್ತೇಜನ, ಸಹಕಾರ ನೀಡಲು ಬದ್ಧವಾಗಿದೆ. ಅಭಿವೃದ್ಧಿ ವಿಚಾರವಾಗಿ ನಮ್ಮ ಸರ್ಕಾರ ಹೊಸ ನೀತಿ ರೂಪಿಸಲಿದೆ. ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕಿದೆ. ನೀವು ಯಶಸ್ಸು ಸಾಧಿಸಲು ಕರ್ನಾಟಕ ಸರಿಯಾದ ಸ್ಥಳವಾಗಿದೆ.
2001ರ ಅವಳಿ ಕಟ್ಟಡ ದಾಳಿ ನಂತರ ಹೂಡಿಕೆದಾರರು ಏಷ್ಯಾದಲ್ಲಿ ಉತ್ತಮ ಹೂಡಿಕೆ ಸ್ಥಳ ಯಾವುದು ಎಂದು ಸಮೀಕ್ಷೆ ನಡೆಸಿದರು. ಈ ಸಮೀಕ್ಷಯಲ್ಲಿ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಪುಣೆ ನಗರಗಳನ್ನು ಸಮೀಕ್ಷೆ ನಡೆಸಲಾಯಿತು. ಒಂದೊಂದು ನಗರ ಕೋಮುವಾದ, ರಾಜಕೀಯ ವಿಚಾರ, ಹವಾಮಾನ ಸಮಸ್ಯೆಗಳು ಎದುರಾದವು. ಕೊನೆಯದಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸಿದಾಗ, ಇಲ್ಲಿ ಪ್ರಾಥಮಕ ಶಿಕ್ಷಣ, ಮಾನವ ಸಂಪನ್ಮೂಲ, ಹವಾಮಾನ ಎಲ್ಲದರಲ್ಲೂ ಬೆಂಗಳೂರು ಹೂಡಿಕೆಗೆ ಸೂಕ್ತ ನಗರ ಎಂಬ ತೀರ್ಮಾನಕ್ಕೆ ಬರಲಾಯಿತು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಆಗ ಅವರೊಂದು ಮಾತು ಹೇಳಿದ್ದರು. “ಮುಂದಿನ ದಿನಗಳಲ್ಲಿ ಎಲ್ಲಾ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ಕೊಟ್ಟು ಆನಂತರ ಬೇರೆ ಕಡೆ ಹೋಗುತ್ತಾರೆ” ಅವರ ಭವಿಷ್ಯ ನಿಜವಾಗಿದೆ. ಕರ್ನಾಟಕ ಮಾದರಿಯನ್ನು ಇಡೀ ದೇಶವೇ ತಿರುಗಿನೋಡುತ್ತಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಆಸ್ತಿಯ ಮೌಲ್ಯ ಕೇವಲ 10 ಪಟ್ಟಲ್ಲ, ಸಾವಿರಾರು ಪಟ್ಟು ಹೆಚ್ಚಾಗಲಿದೆ ಎಂದು ಅಮೆರಿಕಾ ದೇಶದ ರಾಯಭಾರಿಯೊಬ್ಬರು ನನ್ನ ಬಳಿ ಹೇಳಿದ್ದರು. ಅವರ ಮಾತು ನಿಜವಾಗಿದೆ, ಏಕೆಂದರೆ ನಾನು ಸದಾಶಿವ ನಗರದಲ್ಲಿ ಚದರ ಅಡಿಗೆ 2 ಸಾವಿರ ಕೊಟ್ಟು ಮನೆ ತೆಗೆದುಕೊಂಡಿದ್ದೆ ಈಗ ಅದು 30 ಸಾವಿರವಾಗಿ ಬೆಳೆದಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಜಿಂದಾಲ್ ಸಂಸ್ಥೆಯ ಮುಖ್ಯಸ್ಥರು ಕೂಡ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಓದಿದರು. ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೊಸ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಗ್ರಾಮೀಣ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವಂತೆ ಗುಣಮಟ್ಟದ ಶಿಕ್ಷಣ ನೀಡಲು ಪಂಚಾಯ್ತಿ ಮಟ್ಟದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದೇವೆ. ಈ ವಿಚಾರವಾಗಿ ನಿನ್ನೆಯಷ್ಟೆ ಸಿಎಸ್ ಆರ್ ಸಭೆ ಮಾಡಿದ್ದೇವೆ.
ಮೊದಲ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮ್ಮೇಳನ ನಡೆದಿದ್ದು ಎಸ್.ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಮಯದಲ್ಲಿ. ಅಂದಿನಿಂದ ಇಲ್ಲಿಯವರೆಗೆ ಕರ್ನಾಟಕ ಸರ್ಕಾರವು ಉದ್ಯಮ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಒತ್ತು ನೀಡುತ್ತಿದೆ. ಇಂದು ಗುಣಮಟ್ಟದ ಶಿಕ್ಷಣಕ್ಕಾಗಿ ಬೇರೆ ಊರುಗಳಿಂದ ಬೆಂಗಳೂರಿಗೆ, ಕರ್ನಾಟಕಕ್ಕೆ ವಿದ್ಯಾರ್ಥಿಗಳು ವಲಸೆ ಬರುತ್ತಿದ್ದಾರೆ. 250 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಇವೆ ಎಂದು ಹೇಳಿದರು.