Neharu Dream :ಇಸ್ರೋ ಯಶಸ್ಸು; ನೆಹರು ಕನಸು ನನಸಾಗಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: 60 ರ ದಶಕದಲ್ಲಿ ಸಣ್ಣ ಶೆಡ್‌ನಲ್ಲಿ ಪ್ರಾರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಇಸ್ರೋ ಶ್ರಮಕ್ಕೆ ನಾವೆಲ್ಲ ಅಭಿನಂದಿಸುತ್ತೇವೆ. ಇದರೊಂದಿಗೆ ದೇಶದ ಮೊದಲ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು ಕಂಡ ಕನಸು ಇಂದು ನನಸಾಗಿರುವುದಕ್ಕೆ ಭಾರತೀಯನಾಗಿ ನನಗೆ ಹೆಮ್ಮೆಯಾಗುತ್ತಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂತಸ ವ್ಯಕ್ತಪಡಿಸಿದರು.

ಈ ಚಂದ್ರಯಾನದ ಯಶಸ್ಸಿನಲ್ಲಿ ದಕ್ಷಿಣ ಭಾರತದ ಹಾಗೂ ಭಾರತದ ಎಲ್ಲಾ ಭಾಗಗಳಿಂದ ಬಂದಂತಹ ವಿಜ್ಞಾನಿಗಳ ಪರಿಶ್ರಮವಿದೆ. ಬೆಂಗಳೂರಿನಲ್ಲಿ ಇರುವ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಸೋಮನಾಥನ್ ಅವರ ತಂಡ ಮತ್ತು ಸಣ್ಣ ಕಾರ್ಮಿಕರಿಂದ ಹಿಡಿದು ಉನ್ನತ ವಿಜ್ಞಾನಿಗಳಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ತಿಳಿಸಲಾಯಿತು. ಇಂದು (ಗುರುವಾರ) ಮುಖ್ಯಮಂತ್ರಿಗಳು ಭೇಟಿಯಾಗಲಿದ್ದಾರೆ. ಆ ನಂತರ ಶುಭಸುದ್ದಿ ತಿಳಿಸಲಾಗುವುದು” ಎಂದರು.

“ಭಾರತ ಮತ್ತೊಮ್ಮೆ ಜಗತ್ತಿಗೆ ತನ್ನ ಶಕ್ತಿ ಸಾಮರ್ಥ್ಯವನ್ನು ಪರಿಚಯಿಸಿದೆ. ಕನ್ನಡಿಗರ ಪರಿಶ್ರಮ ಇದರಲ್ಲಿ ಹೆಚ್ಚಿದ್ದು, ಕನ್ನಡಿಗನಾಗಿ ನನಗೆ ಹೆಮ್ಮೆಯ ವಿಚಾರ” ಎಂದು ಹೇಳಿದರು.

ಸರ್ವಪಕ್ಷಗಳ ನಿಯೋಗದ ದೆಹಲಿ ಭೇಟಿ ಯಾವಾಗ ಎನ್ನುವ ಪ್ರಶ್ನೆಗೆ, “ಎಲ್ಲ ಪಕ್ಷಗಳ ನಾಯಕರು ಒಂದು ತಾತ್ಕಾಲಿಕ ದಿನಾಂಕವನ್ನು ಗುರುತು ಹಾಕಿ ಪ್ರಧಾನಮಂತ್ರಿಗಳ ಕಚೇರಿಗೆ ತಿಳಿಸುತ್ತೇವೆ. ಆನಂತರ ಕೇಂದ್ರ ನೀರಾವರಿ ಸಚಿವರನ್ನು ಭೇಟಿಯಾಗಿ ನಮ್ಮ ಅಹವಾಲನ್ನು ಮಂಡಿಸುತ್ತೇವೆ. ಸುಪ್ರೀಂ ಕೋರ್ಟಿಗೆ ಗುರುವಾರ ಮೇಲ್ಮನವಿ ಸಲ್ಲಿಸಿ ನಮ್ಮ ಪರಿಸ್ಥಿತಿ ಏನಿದೆಯೋ ಅದನ್ನು ವಿವರಿಸುತ್ತವೆ” ಎಂದು ಉತ್ತರಿಸಿದರು.

“ಮೇಕೆದಾಟು, ಮಹಾದಾಯಿ, ಕಾವೇರಿ ಹೀಗೆ ಸಾಲು, ಸಾಲು ನೀರಿನ ವಿವಾದಗಳಿವೆ, ಇವೆಲ್ಲವನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ದೆಹಲಿಯಲ್ಲಿ ಚರ್ಚೆ ಮಾಡಲಾಗುವುದು. ಕೇಂದ್ರ ಜಲ ಆಯೋಗ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುತ್ತದೆ ಎಂದು ನಂಬಿದ್ದೇವೆ, ರಾಜ್ಯದ ಹಿತವನ್ನು ಎಂದಿಗೂ ನಾವೂ ಕಡೆಗಣಿಸುವುದಿಲ್ಲ” ಎಂದು ಪುನರುಚ್ಚರಿಸಿದರು.

ಎನ್‌ಇಪಿ ವಿಚಾರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿಯ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ “ಚಂದ್ರಯಾನದಂತಹ ಸಂತಸದ ವಿಚಾರ ಹಾಗೂ ಕಾವೇರಿ ನೀರಿನಂತಹ ಸಂಕಷ್ಟದ ಸಂಗತಿಗಳು ಇರುವಾಗ ಈ ಕ್ಷುಲ್ಲಕವಾದ ಎನ್‌ಇಪಿ ಬಗ್ಗೆ ಪ್ರತಿಕ್ರಿಯೆ ನೀಡಬೇಕೇ? ಎನ್ಇಪಿ ಹಳೆಯ ವಿಚಾರ. ಪ್ರಸ್ತುತ ಸಂಕಟಗಳಿಂದ ಪಾರಾಗುವ ಬಗ್ಗೆ ಹಾಗೂ ರಾಜ್ಯಕ್ಕೆ ಸಹಾಯ ಮಾಡುವ ಬಗ್ಗೆ ಅವರು ಯೋಚಿಸಬೇಕಿತ್ತು” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Election:ಚುನಾವಣೆಯಲ್ಲಿ ಅಕ್ರಮ ಆರೋಪ: ಮರು ಚುನಾವಣೆಗೆ ಒತ್ತಾಯ.!

Money: ಪೊಲೀಸರ ಎದುರಲ್ಲಿಯೇ ಅಮಾಯಕ ಮಹಿಳೆಯ ಮೇಲೆ ಹಲ್ಲೆ..!

Lokayuktha: ಪಿಂಚಣಿ ಹಣ ನೀಡಲು ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ದಾಳಿ

About The Author