ಸಿನಿಮಾ ಸುದ್ದಿ : ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ” ಗನ್ಸ್ ಅಂಡ್ ರೋಸಸ್” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಹೆಚ್ ಆರ್ ನಟರಾಜ್, ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ನನ್ನ ಬಗ್ಗೆ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ಆದರೆ ನಾನು ಒಂದು ಕಂಡೀಶನ್ ಹಾಕಿದ್ದೇನೆ. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎಂದು. ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಗೆ ಚಿತ್ರ ತೆರೆಗೆ ಬರಲು ಸಿದ್ದವಾಗಿರುತ್ತದೆ ಎಂದರು.
ನಾನು ಸಾಕಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯಶ್ವಿಕ ನಿಷ್ಕಲ ಈ ಚಿತ್ರದ ನಾಯಕಿ. ಶಶಿಕುಮಾರ್ ಸಂಗೀತ ನೀಡುತ್ತಿದ್ದಾರೆ. ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶರತ್ ಬರೆದಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಕುಮಾರ್ ತಿಳಿಸಿದರು.