ಸಿನಿಮಾ ಸುದ್ದಿ: ವಿಶ್ವ ಪ್ರೊಡಕ್ಷನ್ಸ್ ಹಾಗೂ ಆತ್ಮ ಸಿನಿಮಾಸ್ ಲಾಂಛನದಲ್ಲಿ ವಿಶ್ವನಾಥ್.ಜಿ.ಪಿ ಹಾಗೂ ಪ್ರಬಿಕ್ ಮೊಗವೀರ್ ಅವರು ನಿರ್ಮಿಸುತ್ತಿರುವ ಹಾಗೂ ವೇದ್ ನಿರ್ದೇಶನದ “ರಾವೆನ್” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಶಾಸಕ ಗೋಪಲಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ದೇಶಕ ಎಂ.ಡಿ.ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
“ರಾವೆನ್” ಎಂದರೆ ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂರಬಾರದು ಮುಂತಾದ ನಂಬಿಕೆಗಳು ರೂಡಿಯಲ್ಲಿದೆ. ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಈ ತಿಂಗಳ 21ರಿಂದ ಚಿತ್ರೀಕರಣ ಆರಂಭವಾಗಲಿದೆ. ದಿಲೀಪ್ ಪೈ ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ್, ಕುಂಕುಮ ನಾಯಕಿಯರು. ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ಶ್ರೇಯಾ ಆರಾಧ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಎಂ.ಡಿ.ಶ್ರೀಧರ್ ಅವರು ಸೇರಿದಂತೆ ಅನೇಕರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಿರ್ದೇಶಕ ವೇದ್.
ನಾನು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, ವೇದ್ ಅವರು ಮಾಡಿಕೊಂಡಿರುವ ಕಥೆ ಇಷ್ಟವಾಯಿತು. ಹಾಗಾಗಿ ಪ್ರಬಿಕ್ ಮೊಗವೀರ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬದ ದಿನವೇ ಚಿತ್ರ ಆರಂಭವಾಗಿರುವುದು ಖುಷಿಯಾಗಿದೆ ಎಂದರು.